ಅಂಕೋಲಾ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಮಾಲಕರ ಹಾಗೂ ಚಾಲಕರ ಸಂಘ (ರಿ) ಇಂದು ಧ್ವಜಾರೋಹಣ, ಸಭೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿ, ಹರ್ಷೋದ್ಗಾರ ಮತ್ತು ದೇಶಭಕ್ತಿಯ ವಾತಾವರಣದಲ್ಲಿ ರಾಷ್ಟ್ರೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಂಘದ ಅಧ್ಯಕ್ಷ ರಮಾಕಾಂತ್ ಎಂ. ನಾಯ್ಕ (ಗಜು) ಧ್ವಜಾರೋಹಣ ನೆರವೇರಿಸಿದರು.
ನಂತರ ಸದರಿ ಸಭೆಯನ್ನು ಉದ್ದೇಶಿಸಿ ಸಂಘದ ಕಾನೂನು ಸಲಹೆಗಾರ ವಕೀಲರಾದ ನಾಗಾನಂದ ಈಶ್ವರ ಬಂಟ್ ಮಾತನಾಡಿ, 79ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಿ,
“ಶ್ರೀ ಗಜಾನನ ಟ್ಯಾಕ್ಸಿ ಚಾಲಕರ ಹಾಗೂ ಮಾಲಕರ ಸಂಘವು ಪ್ರತಿವರ್ಷವೂ ದೇಶಭಕ್ತಿಯ ಜ್ವಾಲೆಯನ್ನು ಜೀವಂತವಾಗಿರಿಸಿ, ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಹಬ್ಬವನ್ನು ಎಲ್ಲ ಚಾಲಕರು ಹಾಗೂ ಮಾಲಕರು ಒಗ್ಗಟ್ಟಾಗಿ, ಸಂತೋಷದಿಂದ ಆಚರಿಸುತ್ತಿದ್ದಾರೆ. ನಮ್ಮೆಲ್ಲರ ಆಶಯ ಅನುಗುಣವಾಗಿ ಸ್ವಾತಂತ್ರ್ಯೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸಿ, ರಾಷ್ಟ್ರದ ಪ್ರಗತಿಯಲ್ಲಿ ನಮ್ಮೆಲ್ಲರ ಕೊಡುಗೆಯನ್ನು ನೀಡೋಣ. ಇಂದಿನ ಸಂದರ್ಭದಲ್ಲಿ ಎಲ್ಲರೂ ಏಕತೆಯಿಂದಿದ್ದು, ದೇಶದ ಸಾರ್ವಭೌಮತೆಯನ್ನು ಕಾಪಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ರಾಷ್ಟ್ರ ನಿರ್ಮಾಣಕ್ಕೆ ಅವಶ್ಯಕ” ಎಂದು ಹೇಳಿದರು.ಅವರು ಮುಂದುವರಿದು, “ನಮ್ಮ ಎಲ್ಲಾ ಟ್ಯಾಕ್ಸಿ ಬಂಧುಗಳು ಪರಸ್ಪರ ಸಹಕಾರದಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿ ನೆರೆದಿರುವ ಎಲ್ಲ ಟೆಕ್ಸಿ ಚಾಲಕ-ಮಾಲಕರಿಗೆ ಅಭಿನಂದನೆಗಳು” ಎಂದು ಭಾಷಣ ಮುಗಿಸಿದರು.
ನಂತರ ಸಂಘದ ಅಧ್ಯಕ್ಷರಾದ ರಮಾಕಾಂತ್ ಎಂ. ನಾಯ್ಕ (ಗಜು) ಮಾತನಾಡಿ, 79ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿ,
“ಈ ವರ್ಷ ಸಂಘದ ವತಿಯಿಂದ ಹೋಟೆಲ್ ಸೂರ್ಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಎಲ್ಲ ಸದಸ್ಯರು ಸಹಕರಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಶಿಬಿರ ನಡೆಯಲಿದ್ದು, ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಗೆ ಸೂರ್ಯ ಹೋಟೆಲ್‌ನಲ್ಲಿ ಸಭೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ,ಟೆಕ್ಸಿ ಮಾಲಕರು ಹಾಗೂ ಚಾಲಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಸಂಬಂಧಿತ ನಿರ್ಣಯಗಳನ್ನು ಅಂಗೀಕರಿಸಿದರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ರಕ್ತದಾನ ಶಿಬಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ರಕ್ತದಾನ ಮಾಡಿದರು. ಕುಮಟಾ ಯುಕೆ ಬ್ಲಡ್ ಬ್ಯಾಂಕ್ ತಂಡ ರಕ್ತ ಸಂಗ್ರಹಣೆಯನ್ನು ನೆರವೇರಿಸಿತು. ಸ್ವಾತಂತ್ರ್ಯೋತ್ಸವದ ಶುಭ ದಿನದಂದು ಸಮಾಜ ಸೇವೆಯ ಮಾದರಿಯನ್ನು ತೋರಿದ ಸಂಘದ ಈ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.

ಬಿಳಿ ಸಮವಸ್ತ್ರ ಧರಿಸಿ ಶಿಸ್ತನ್ನು ಮೆರೆದ ಶ್ರೀ ಗಜಾನನ ಟ್ಯಾಕ್ಸಿ ಸಂಘದ ಸದಸ್ಯರು, ದೇಶಭಕ್ತಿಯ ಸಂದೇಶವನ್ನು ಹರಡಿದರು. ಈ ಮೂಲಕ ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಮಾಲಕರ ಹಾಗೂ ಚಾಲಕರ ಸಂಘ 79ನೇ ಸ್ವಾತಂತ್ರ್ಯೋತ್ಸವವನ್ನು ಸೇವಾ ಚಟುವಟಿಕೆ ಯಿಂದ ಸ್ಮರಣೀಯಗೊಳಿಸಿತು.
ಈ ಸಂದರ್ಭದಲ್ಲಿ ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಸಂಘದ ಅಧ್ಯಕ್ಷ: ರಮಾಕಾಂತ್ ಎಂ. ನಾಯ್ಕ (ಗಜು)– ಉಪಾಧ್ಯಕ್ಷ: ಅಕ್ಷಯ್ ಅಂಕೋಲೆಕರ್– ಕಾರ್ಯದರ್ಶಿ: ಸತೀಶ್ ಬಿ. ಕಾಮತ್– ಖಜಾಂಚಿ: ವಿವೇಕ್ ನಾಯ್ಕ– ಸಹ ಕಾರ್ಯದರ್ಶಿ: ಪ್ರವೀಣ್ ಕೆಣಿಕರ್– ಕೋಶಾಧಿಕಾರಿ: ಅಶೋಕ ನಾಯ್ಕ– ಸದಸ್ಯರು: ರಫೀಕ್ ಶೇಖ, ಚಂದ್ರಕಾಂತ ಎಂ. ನಾಯ್ಕ, ಶ್ರೀನಿವಾಸ್ ಗಾವ್ಕರ್, ಪ್ರದೀಪ ಬಂಟ್, ರಾಜೇಶ್ ಪಿ. ನಾಯ್ಕ ಹಾಗೂ ಟ್ಯಾಕ್ಸಿ ಸಂಘದ ಮಾಲಕರು &ಚಾಲಕರು ಉಪಸ್ಥಿತರಿದ್ದರು.
ವರದಿ: ಕಿರಣ ಚಂದ್ರಹಾಸ ಗಾಂವಕರ

