ಸಿದ್ದಾಪುರ: ತಾಲೂಕಿನ ಮಂಡ್ಲಿಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ರಣಧೀರ ವೇದಿಕೆ ಹಾಗೂ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಶಿರಸಿ-ಸಿದ್ದಾಪುರ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ್ ಅವರು ಸ್ಥಳದಲ್ಲೇ ಸ್ಪಂದಿಸಿದ್ದು, ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣವೇ 3.5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ.
ಸಮಸ್ಯೆಯ ಹಿನ್ನೆಲೆ: ಮಂಡ್ಲಿಕೊಪ್ಪ ಗ್ರಾಮದಲ್ಲಿದ್ದ ಹಳೆಯ ಬಸ್ ನಿಲ್ದಾಣವು ಕಳೆದ 3-4 ವರ್ಷಗಳ ಹಿಂದೆಯೇ ಶಿಥಿಲಗೊಂಡು ಬಿದ್ದಿತ್ತು. ಇದರಿಂದಾಗಿ ಗ್ರಾಮದ ಸುಮಾರು 30ರಿಂದ 40 ವಿದ್ಯಾರ್ಥಿಗಳು ದಿನನಿತ್ಯ ಶಾಲೆ-ಕಾಲೇಜುಗಳಿಗೆ ತೆರಳಲು ಹಾಗೂ ಗ್ರಾಮಸ್ಥರು ಕೆಲಸ ಕಾರ್ಯಗಳಿಗೆ ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಬಸ್ಸಿಗಾಗಿ ಕಾಯುವಾಗ ಬಿಸಿಲು, ಮಳೆಯಲ್ಲಿ ರಸ್ತೆಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿತ್ತು.ಈ ಹಿನ್ನೆಲೆಯಲ್ಲಿ, ಕರ್ನಾಟಕ ರಣಧೀರ ವೇದಿಕೆಯ ಸಿದ್ದಾಪುರ ತಾಲೂಕಾ ಅಧ್ಯಕ್ಷರಾದ ಮೋಹನ್ ಪಾಂಡುರಂಗ ನಾಯ್ಕ್ ಅವರ ನೇತೃತ್ವದಲ್ಲಿ ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಸಕರನ್ನು ಭೇಟಿಯಾಗಿ, ಕೂಡಲೇ ಹೊಸ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಲಿಖಿತ ಮನವಿ ಸಲ್ಲಿಸಿದರು.
ಶಾಸಕರ ತ್ವರಿತ ಕ್ರಮ: ಗ್ರಾಮಸ್ಥರ ಅಹವಾಲನ್ನು ಆಲಿಸಿದ ಶಾಸಕ ಭೀಮಣ್ಣ ನಾಯ್ಕ್ ಅವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತರಾದರು. ಮನವಿ ಸ್ವೀಕರಿಸಿದ ಸ್ಥಳದಲ್ಲೇ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 3,50,000 (ಮೂರೂವರೆ ಲಕ್ಷ) ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದರು ಹಾಗೂ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಾಸಕರ ಈ ತ್ವರಿತ ಸ್ಪಂದನೆಗೆ ಕರ್ನಾಟಕ ರಣಧೀರ ವೇದಿಕೆ ಹಾಗೂ ಮಂಡ್ಲಿಕೊಪ್ಪ ಸಮಸ್ತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ: ಸುಪ್ರಿಯಾ ವಿಷ್ಣು ನಾಯ್ಕ

