ಗ್ರಾಮದ ಹೆಸರು ಕೂಡ ಸರಿಯಾಗಿ ಬರೆಯಲಾಗದ ಅಂಕೋಲಾ ಪುರಸಭೆ – “ಬೇಲುಕೇರಿ ರಸ್ತೆ” ವಿವಾದ: ಇದು ಟೈಪಿಂಗ್ ತಪ್ಪೇ? ಇಲ್ಲ ಆಡಳಿತಾತ್ಮಕ ನಿರ್ಲಕ್ಷ್ಯವೇ..?

News Desk
2 Min Read

ಅಂಕೋಲಾ: ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳ ರಸ್ತೆ ಹಾಗೂ ಪ್ರದೇಶಗಳ ಗುರುತಿಗಾಗಿ ಸಾರ್ವಜನಿಕ ಹಣ ಬಳಸಿ ಸೂಚನಾ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಸಾಮಾನ್ಯವಾಗಿ ಜನರಿಗೆ ದಾರಿ ತಿಳಿಯಲು ಹಾಗೂ ಪ್ರದೇಶಗಳನ್ನು ಗುರುತಿಸಲು ಸಹಕಾರಿಯಾಗಬೇಕಾದ ಈ ಕಾರ್ಯ ಇದೀಗ ಪುರಸಭೆಯ ಅಜಾಗರೂಕತೆ ಮತ್ತು ನಿರ್ಲಕ್ಷ್ಯವನ್ನು ಬಹಿರಂಗಪಡಿಸುವ ಉದಾಹರಣೆಯಾಗಿ ಮಾರ್ಪಟ್ಟಿದೆ.

ಇತ್ತೀಚೆಗೆ ಬೆಲೇಕೇರಿ ಗ್ರಾಮಕ್ಕೆ ಸಂಬಂಧಿಸಿದ ರಸ್ತೆಯ ನಾಮಫಲಕದಲ್ಲಿ ಗ್ರಾಮ ಹೆಸರನ್ನು ತಪ್ಪಾಗಿ “ಬೇಲುಕೇರಿ ರಸ್ತೆ” ಎಂದು ಬರೆದು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಬೆಲೇಕೇರಿ ಎಂಬುದು ದಶಕಗಳಿಂದಲೂ ಸರಕಾರಿ ದಾಖಲೆಗಳು, ಭೂ ದಾಖಲೆಗಳು, ಮತದಾರರ ಪಟ್ಟಿ ಹಾಗೂ ಆಡಳಿತಾತ್ಮಕ ದಾಖಲೆಯಲ್ಲಿ ಸ್ಪಷ್ಟವಾಗಿ ಅಸ್ತಿತ್ವದಲ್ಲಿರುವ ಹೆಸರು. ಇಂತಹ ಸ್ಪಷ್ಟ ಮತ್ತು ಸ್ಥಿರವಾದ ಗ್ರಾಮ ಹೆಸರನ್ನು ಪುರಸಭೆ ಬೋರ್ಡಿನಲ್ಲಿ ತಪ್ಪಾಗಿ ಉಲ್ಲೇಖಿಸಿರುವುದು ಸಾಮಾನ್ಯ ತಪ್ಪಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಹೆಸರೇ ಜನರ ಗುರುತು, ಇತಿಹಾಸ ಮತ್ತು ಕಾನೂನಾತ್ಮಕ ದಾಖಲೆಗಳಿಗೆ ಸಂಬಂಧಿಸಿದ್ದಾಗಿರುವ ಸಂದರ್ಭದಲ್ಲಿ, ಪುರಸಭೆ ಅಧಿಕಾರಿಗಳು ಯಾವುದೇ ಪರಿಶೀಲನೆ ಇಲ್ಲದೆ ಬೋರ್ಡು ಅಳವಡಿಸಿರುವುದೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಈ ಬೋರ್ಡು ಅಳವಡಿಸುವ ಮುನ್ನ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ನಾಗರಿಕರ ಅಭಿಪ್ರಾಯ ಪಡೆಯದೆ, ಕೇವಲ ಕಚೇರಿ ಮಟ್ಟದಲ್ಲೇ ನಿರ್ಧಾರ ತೆಗೆದುಕೊಂಡು ನಾಮಫಲಕ ಅಳವಡಿಸಿರುವುದಾದರೆ, ಅದು ಗಂಭೀರ ನಿರ್ಲಕ್ಷ್ಯಕ್ಕೆ ಸಮಾನವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಾರ್ವಜನಿಕ ಹಣದಿಂದ ಮಾಡಲಾಗಿರುವ ಕೆಲಸದಲ್ಲಿ ಇಂತಹ ತಪ್ಪು ಸಂಭವಿಸಿದರೆ, ಅದರ ಹೊಣೆ ಯಾರ ಮೇಲೆ ಬೀಳಬೇಕು ಎಂಬ ಪ್ರಶ್ನೆಯೂ ಜನರಲ್ಲಿ ಮೂಡಿದೆ. ಇನ್ನು ಗಂಭೀರವಾದ ವಿಷಯವೆಂದರೆ, ಈ ತಪ್ಪು ಬೋರ್ಡು ಗಮನಕ್ಕೆ ಬಂದ ಬಳಿಕವೂ ಪುರಸಭೆ ವತಿಯಿಂದ ತಕ್ಷಣ ಸರಿಪಡಿಸುವ ಯಾವುದೇ ಕ್ರಮ ಕೈಗೊಳ್ಳದಿರುವುದು.

ಇದರಿಂದ ಇದು ಕೇವಲ ಟೈಪಿಂಗ್ ತಪ್ಪೇ ಅಥವಾ ಆಡಳಿತಾತ್ಮಕ ನಿರ್ಲಕ್ಷ್ಯದ ಪರಿಣಾಮವೇ ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಒಂದು ಬೋರ್ಡಿನಲ್ಲಿ ಇಂತಹ ತಪ್ಪು ಕಂಡುಬಂದಿರುವಾಗ, ಪುರಸಭೆ ವ್ಯಾಪ್ತಿಯ ಇತರ ನಾಮಫಲಕಗಳಲ್ಲೂ ಇದೇ ರೀತಿಯ ತಪ್ಪುಗಳು ಅಡಗಿದೆಯೇ ಎಂಬ ಅನುಮಾನವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಗಳು ಜನರ ವಿಶ್ವಾಸಕ್ಕೆ ಧಕ್ಕೆ ತರುವಂತಾಗಬಾರದು ಎಂಬುದು ಸ್ಥಳೀಯರ ಒತ್ತಾಯ. ಬೆಲೇಕೇರಿ ಎಂಬ ಇತಿಹಾಸಿಕ ಮತ್ತು ಅಧಿಕೃತ ಹೆಸರನ್ನು ತಪ್ಪಾಗಿ ಪ್ರದರ್ಶಿಸಿರುವ ನಾಮಫಲಕವನ್ನು ತಕ್ಷಣ ತೆರವುಗೊಳಿಸಿ, ಸರಿಯಾದ ಹೆಸರಿನ ಬೋರ್ಡನ್ನು ಅಳವಡಿಸುವ ಜೊತೆಗೆ, ಈ ತಪ್ಪಿಗೆ ಕಾರಣರಾದವರ ವಿರುದ್ಧ ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದೀಗ ಈ ವಿಷಯದಲ್ಲಿ ಅಂಕೋಲಾ ಪುರಸಭೆ ಯಾವ ಸ್ಪಷ್ಟನೆ ನೀಡುತ್ತದೆ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ.

Share This Article