ಅಂಕೋಲಾ : ಹಟ್ಟಿಕೇರಿ ಹಾಲಿ ಅವರ್ಸಾ ಗ್ರಾಮದ ನಿವಾಸಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಟ್ಟಿಕೇರಿಯ ಅಟೆಂಡರ್ ಆಗಿದ್ದ ದಿನೇಶ ನಾಯ್ಕ (38) ಅವರು ಮಂಗಳವಾರ ಮಧ್ಯಾಹ್ನ ಅಕಸ್ಮಿಕವಾಗಿ ಆರೋಗ್ಯ ಬದಲಾಗಿದ್ದು, ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟ ಘಟನೆ ಸ್ಥಳೀಯವಾಗಿ ದುಃಖ ವ್ಯಕ್ತಪಡಿಸಿದೆ.
ಮೃತರ ಕುಟುಂಬದ ಮಾಹಿತಿಯ ಪ್ರಕಾರ, ದಿನೇಶ ನಾಯ್ಕ ಅವರ ಚಿಕ್ಕಪ್ಪ ನಿಧನವಾದ ಕಾರಣ ಕಳೆದ ಆರು ದಿನಗಳಿಂದ ಅವರು ರಜೆ ತೆಗೆದುಕೊಂಡು ಮನೆಯಲ್ಲಿ ಇದ್ದರು. ಕಳೆದ ಮೂರು-ನಾಲ್ಕು ದಿನಗಳಿಂದ ಆಹಾರ ಸೇವನೆ ಕಡಿಮೆಯಾಗಿದ್ದು, ದೈಹಿಕ ಸ್ಥಿತಿ ಸಹ ದುರ್ಬಲಗೊಂಡಿತ್ತು. ಮಂಗಳವಾರ ಮಧ್ಯಾಹ್ನ ಸುಮಾರು 3.30 ಗಂಟೆ ಸಮಯದಲ್ಲಿ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಮೊದಲು ಅವರ್ಸಾದ ಪ್ರೇಮಾನಂದ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಪರೀಕ್ಷೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆರ್ಯ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು.
ಕುಟುಂಬದವರು ತಕ್ಷಣ ಅವರನ್ನು ಆರ್ಯ ಮೆಡಿಕಲ್ ಆಸ್ಪತ್ರೆಗೆ ಸಾಗಿಸಿದರೂ, ಅಲ್ಲಿ ವೈದ್ಯರು ಲಭ್ಯವಿರದ ಕಾರಣ ಅವರನ್ನು ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ, ದಿನೇಶ ನಾಯ್ಕ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದು ಸಂಜೆ 4.50ಕ್ಕೆ ದೃಢಪಟ್ಟಿತು.
ಈ ಕುರಿತು ಮೃತರ ಪತ್ನಿ ದೀಕ್ಷಾ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗಂಡನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹ ಹಸ್ತಾಂತರಿಸಬೇಕೆಂದು ಮನವಿ ಮಾಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯ ಎಎಸ್ಐ ಜ್ಞಾನೇಶ್ವರ ಹರಿಕಂತ್ರ ಅವರು ದೂರು ದಾಖಲಿಸಿಕೊಂಡ್ದಿದ್ದು. ಸದರಿ ವ್ಯಕ್ತಿಯ ಸಾವಿನ ತನಿಖೆ ಮುಂದುವರಿಸಿದ್ದಾರೆ.
ವರದಿ: ಕಿರಣ ಗಾಂವಕರ

