ಅಂಕೋಲಾ: ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಾರವಾರಕ್ಕೆ ನಿಯೋಜನೆ – ಶಿಕ್ಷಕರ ಸಂಘದ ಆಕ್ಷೇಪ..

News Desk
1 Min Read

ಅಂಕೋಲಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಅಂಕೋಲಾ ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಕರ್ನಾಟಕ ಘನ ಸರ್ಕಾರವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಸಲಿರುವ ನಾಗರಿಕರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಅವರ್ಸಾ ಹಾಗೂ ಬಾವಿಕೇರಿ ಕ್ಲಸ್ಟರ್ ವ್ಯಾಪ್ತಿಯ 77 ಮಂದಿ ಶಿಕ್ಷಕರನ್ನು ಹಾಗೂ ಇಬ್ಬರು ಶಿಕ್ಷಕರನ್ನು ಮೇಲ್ವಿಚಾರಕರಾಗಿ ಕಾರವಾರ ತಾಲೂಕಿಗೆ ನಿಯೋಜಿಸಿರುವ ಕುರಿತು ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

“ಶಿಕ್ಷಕರು ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಶಿಸ್ತಿನಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಶಿಕ್ಷಕರನ್ನು ಕಾರವಾರಕ್ಕೆ ಕಳುಹಿಸುವುದು ತುಂಬಾ ತೊಂದರೆಯಾಗುತ್ತದೆ. ವಿಶೇಷವಾಗಿ ಶೇಕಡ 80ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರು ಮಧ್ಯವಯಸ್ಸಿನವರಾಗಿದ್ದು, ಅವರಿಗೆ ಅನಾನುಕೂಲ ಉಂಟಾಗುತ್ತಿದೆ. ಇದರಿಂದ ಅಂಕೋಲೆಯ ಶಿಕ್ಷಣ ವಲಯದಲ್ಲಿ ಗೊಂದಲ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ”.

ಶಿಕ್ಷಕರ ಸಂಘವು, ಅಂಕೋಲಾ ತಾಲೂಕಿನ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿಯೇ ಗಣತಿ ಕಾರ್ಯವನ್ನು ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದೆ.

ಮನವಿಯನ್ನು ಸಂಘದ ಪ್ರತಿನಿಧಿ ಜಗದೀಶ್ ಜೆ. ನಾಯಕ ತಹಶೀಲ್ದಾರರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಓದಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This Article