ಭಟ್ಕಳ ಗ್ರಾಮೀಣ ಪೊಲೀಸರಿಂದ ಇಸ್ಪೀಟ್ ಜೂಜಾಟದ ಮೇಲೆ ದಾಳಿ: ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ವಶ!

News Desk
1 Min Read

ಭಟ್ಕಳ, ಜುಲೈ 13, 2025: ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಮಾವಿನಕುರ್ವೆ ಬಂದರು ಪ್ರದೇಶದಲ್ಲಿ ನಡೆಸಿದ ದಿಢೀರ್ ಕಾರ್ಯಾಚರಣೆ ಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿಗಳನ್ನು ಬಂಧಿಸಿ, ₹2,04,938 ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕುರ್ವೆ ಬಂದರು ಪ್ರದೇಶದಲ್ಲಿ ಅಕ್ರಮವಾಗಿ “ಅಂದರ್ ಬಾಹರ್” ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ, ಹಣ ಪಣವಾಗಿಟ್ಟು ಇಸ್ಪೀಟ್ ಆಡುತ್ತಿದ್ದ ರಾಘವೇಂದ್ರ, ನಾಗೇಶ, ಸನಾವುಲ್ಲಾ, ಗೋವಿಂದ, ಮೋಹನ, ಶ್ರೀನಿವಾಸ, ರಾಮಚಂದ್ರ ಮತ್ತು ಪಾಂಡುರಂಗ ಎಂಬುವವರನ್ನು ಬಂಧಿಸಲಾಯಿತು. ಆದಾಗ್ಯೂ, ಕಾರ್ಯಾಚರಣೆಯ ವೇಳೆ ಕೆಲವು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸರು ಬಂಧಿತರಿಂದ ₹4,938 ನಗದು, 52 ಇಸ್ಪೀಟ್ ಕಾರ್ಡ್‌ಗಳು ಮತ್ತು ನಾಲ್ಕು ಮೋಟಾರು ಸೈಕಲ್‌ಗಳನ್ನು (ತಲಾ ₹50,000 ಮೌಲ್ಯದ) ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಒಟ್ಟು ಸ್ವತ್ತುಗಳ ಮೌಲ್ಯ ₹2,04,938 ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 82/2025, ಕಲಂ 112 ಬಿ.ಎನ್.ಎಸ್. 2023 ಹಾಗೂ 80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ..

Share This Article