ಅಂಕೋಲಾ, ಜುಲೈ 13: ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೇ 23, 2025 ರಂದು ಹೊರಡಿಸಿದ ಆದೇಶದ ಪ್ರಕಾರ, ಪ್ರತಿ ತಿಂಗಳ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಲ್ಲಿ ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಕಾರ್ಯ ನಿರ್ವಹಿಸಬೇಕು. ಈ ದಿನಗಳಲ್ಲಿ ಕೆಲಸ ಮಾಡಿದ ನಂತರದ ಮಂಗಳವಾರದಂದು ಕಚೇರಿಗೆ ರಜೆ ನೀಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಈ ಆದೇಶ ಜೂನ್ 1 ರಿಂದ ಡಿಸೆಂಬರ್ 28, 2025ರ ತನಕ ಜಾರಿಯಲ್ಲಿದೆ. ಆದರೂ ಕೂಡ, ಜುಲೈ 13ನೇ ಭಾನುವಾರದಂದು ಅಂಕೋಲಾ ಉಪನೋಂದಣಿ ಕಚೇರಿ ಮುಚ್ಚಲ್ಪಟ್ಟಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಕೇಳೋಣ ಎಂದು ಉಪ ನೋಂದಣಿ ಅಧಿಕಾರಿಗೆ ಕರೆ ಮಾಡಲಾಗಿ ಮೊಬೈಲ್ ರಿಂಗ್ ಆಗಿತ್ತು ಆದರೆ ಅಧಿಕಾರಿ ಕರೆ ಸ್ವೀಕರಿಸಲೇ ಇಲ್ಲ . ಮೊಬೈಲ್ ಕಂಪನಿ ಕಡೆಯಿಂದ ನೀವು ಕರೆ ಮಾಡಲಾಗಿರುವ ಚಂದಾದಾರರು ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂದು ಹೇಳಿ ಕರೆ ಕಟ್ಟಾಯಿತು..
ಈಗ ಬರುವ ಮಂಗಳವಾರದಂದು ಸಹ ಕಚೇರಿ ಮುಚ್ಚಿಲಿರುವ ಸಾಧ್ಯತೆಯಿದೆ ಎಂಬ ಮಾಹಿತಿ ಸಿಕ್ಕಿರುವ ಕಾರಣ, ಜನರಿಗೆ ನಿರಂತರವಾಗಿ ಎರಡು ದಿನ ಸೇವೆ ಸಿಗದಂತಾಗಿದೆ.ಇದರಿಂದಾಗಿ, ಭಾನುವಾರ ತಮ್ಮ ದಾಖಲೆಗಳ ನೋಂದಣಿಗಾಗಿ ಕಚೇರಿಗೆ ಭೇಟಿ ನೀಡಿದ ಸಾರ್ವಜನಿಕರು ಕಂಗಾಲಾಗಿ ಹಿಂತಿರುಗಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಹೋರಾಟಗಾರ ಶ್ರೀ ಸುಭಾಷ್ ಗಂಗಾಧರ ನಾಯ್ಕ ಅವರು ತಮ್ಮ ಅಸಮಾಧಾನವನ್ನು ಹೀಗೆ ವ್ಯಕ್ತಪಡಿಸಿದ್ದಾರೆ:
“ಸರ್ಕಾರ ನೀಡಿದ ಸ್ಪಷ್ಟ ಆದೇಶವಿರುವಾಗಲೂ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿದರೆ, ಸಾರ್ವಜನಿಕರ ಕೆಲಸ ಹೇಗೆ ನಡೆಯಬೇಕು? ನಾನು ಭಾನುವಾರ ನನ್ನ ದಾಖಲೆಗಳ ಕುರಿತು ಮಾಹಿತಿ ಪಡೆಯಲು ಕಚೇರಿಗೆ ಹೋಗಿದ್ದೆ. ಆದರೆ ಮುಚ್ಚಿರುವುದನ್ನು ನೋಡಿ ನಿರಾಸೆ ಆಯಿತು.ತಿಂಗಳಿಗೆ ಸಂಪೂರ್ಣ ಸಂಬಳ ಪಡೆಯುವ ಅಧಿಕಾರಿಗಳು ಸರ್ಕಾರದ ನಿಯಮವನ್ನೇ ಪಾಲಿಸದಿದ್ದರೆ, ಅದು ಸರಿಯೇ? ಸಾರ್ವಜನಿಕರಿಗೆ ಹಾನಿ ಯಾಗದಂತೆ ಕನಿಷ್ಟ ಒಂದು ಸೂಚನಾ ಫಲಕ ಹಾಕಿದರೂ ಆಗುತಿತ್ತು. ಹೀಗೆ ಮುಚ್ಚಿದರೆ ಜನರ ಸಮಯ ವ್ಯರ್ಥವಾಗುತ್ತದೆ.” ಎಂದರು
ಈ ರೀತಿಯ ಘಟನೆಗಳಿಂದ ಸರಕಾರದ ಆದೇಶಗಳಿಗೆ ಸಾರ್ವಜನಿಕರಲ್ಲಿ ಭರವಸೆ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. “ಎನಿವೇರ್ ನೋಂದಣಿ” ವ್ಯವಸ್ಥೆಯಂತೆ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಉಪನೋಂದಣಿ ಕಚೇರಿಯಲ್ಲಿ ದಾಖಲೆಗಳನ್ನು ನೋಂದಾಯಿಸ ಬಹುದಾದರೂ, ಸ್ಥಳೀಯ ಮಟ್ಟದಲ್ಲಿ ಕಚೇರಿಗಳ ಮುಚ್ಚಿರುವುದರಿಂದ ಇದರ ಪ್ರಯೋಜನ ಜನರಿಗೆ ಸಿಗುತ್ತಿಲ್ಲ.
ಸರ್ಕಾರದ ನಿಯಮಗಳನ್ನು ಸ್ಥಳೀಯ ಮಟ್ಟದಲ್ಲಿ ಸರಿಯಾಗಿ ಜಾರಿಗೆ ತರುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ. ಮುಂದೆ ಇಂತಹ ಸಂದರ್ಭಗಳು ಪುನರಾವೃತ್ತಿಯಾಗದಂತೆ ಸ್ಪಷ್ಟ ಸೂಚನೆಗಳು ಮತ್ತು ಸಾರ್ವಜನಿಕರಿಗೆ ಮುಂಚಿತ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ

