ದಿನಪತ್ರಿಕೆ ಓದುವಿಕೆಯಿಂದ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ – ಅಂಕೋಲಾದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಉದ್ಘಾಟನೆ..

News Desk
2 Min Read

ಅಂಕೋಲಾ: ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಜಾಗತಿಕ ಆಗುಹೋಗುಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಬದಲು ದಿನಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಅಂಕೋಲಾ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ ಕರೆ ನೀಡಿದರು.

ಪಟ್ಟಣದ ಪಿ.ಎಂ. ಜ್ಯೂನಿಯರ್ ಕಾಲೇಜಿನ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಪತ್ರಿಕಾ ಮಾಧ್ಯಮಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಸಾಮಾಜಿಕ ಪರಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಎರಡೂ ಕುಗ್ಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದರೂ ಸಾಮಾನ್ಯ ಜ್ಞಾನ ಅತ್ಯಂತ ಅಗತ್ಯವಾಗಿದ್ದು, ದಿನಪತ್ರಿಕೆಗಳು ಜ್ಞಾನ ಭಂಡಾರವಾಗಿವೆ ಎಂದರು.ಇಂದಿನ ವಿದ್ಯಾರ್ಥಿಗಳು ಅನಗತ್ಯ ಒತ್ತಡ, ನಕಾರಾತ್ಮಕ ಚಿಂತನೆ, ಹೋಲಿಕೆಯ ಮನೋಭಾವಗಳಿಂದ ವಿಚಲಿತರಾಗುತ್ತಿದ್ದು, ಆತ್ಮಹತ್ಯೆ ಮುಂತಾದ ದುಡುಕಿನ ನಿರ್ಧಾರಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಅವರು ಚಿಂತಿಸಿದರು.

ಉತ್ತಮ ವಿಷಯಗಳತ್ತ ಗಮನ ಹರಿಸಿ, ಕಲಿಕೆಗೆ ಹೆಚ್ಚು ಒತ್ತು ನೀಡಬೇಕೆಂದು ಅವರು ಮನವಿ ಮಾಡಿದರು.ವಿದ್ಯಾರ್ಥಿ ಯುವಜನರ ಮಾನಸಿಕ ಸದೃಢತೆ ಕುರಿತು ವಿಶೇಷ ಉಪನ್ಯಾಸ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಅವರು, ಆತ್ಮಹತ್ಯೆ ಇಂದು ಜಾಗತಿಕ ಸಮಸ್ಯೆಯಾಗುತ್ತಿದ್ದು, ಕುಟುಂಬದೊಂದಿಗೆ ಸಮಯ ಕಳೆಯುವಿಕೆ ಕಡಿಮೆಯಾಗಿರುವುದು ಆತಂಕದ ವಿಷಯವಾಗಿದೆ ಎಂದು ಹೇಳಿದರು.

ಸಮಸ್ಯೆಗಳ ಕುರಿತು ತಂದೆ-ತಾಯಿಗಳೊಂದಿಗೆ ಹಂಚಿಕೊಳ್ಳಬೇಕು ಹಾಗೂ ಅಗತ್ಯವಿದ್ದರೆ ಆರೋಗ್ಯ ಇಲಾಖೆಯಲ್ಲಿ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಇದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ.ಎಂ. ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಅವರು, ವಿದ್ಯಾರ್ಥಿಗಳು ಮೊಬೈಲ್ ಎಂಬ ಕತ್ತಲ ಕೋಣೆಯಿಂದ ಹೊರಬಂದು ವೈವಿಧ್ಯಮಯ ಪ್ರಪಂಚದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ದೈವಜ್ಞ, ಕರಾವಳಿ ಉಸ್ತುವಾರಿ ಕುಮಾರ ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಶಂಕರ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಸ್ವಾಗತ ಗೀತೆ ಮೂಲಕ ಆರಂಭವಾದ ಕಾರ್ಯಕ್ರಮವನ್ನು ತಾಲೂಕು ಅಧ್ಯಕ್ಷ ಮಾರುತಿ ಹರಿಕಂತ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರು ವಿದ್ಯಾಧರ ಮೊರಬಾ, ವಿಲಾಸ ನಾಯಕ, ನಾಗರಾಜ ಶೆಟ್ಟಿ ಪರಿಚಯಿಸಿದರು. ಸುಪ್ರಿಯಾ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಕಾರ್ಯದರ್ಶಿ ಕಿರಣ ಗಾಂವಕರ್ ವಂದಿಸಿದರು.

Share This Article