ಅಂಕೋಲಾ: ರಾತ್ರಿ ಗದ್ದೆಗೆ ತೆರಳಿದ್ದ ರೈತ “ವಾಸುದೇವ ಗೌಡ” ಬಾವಿಗೆ ಬಿದ್ದು ಸಾವು; ದಿಕ್ಕಿಲ್ಲದಂತಾದ ಬಡ ಕುಟುಂಬ..

News Desk
1 Min Read

ಅಂಕೋಲಾ: ಬೆಳೆದು ನಿಂತ ಶೇಂಗಾ ಪೈರಿಗೆ ನೀರುಣಿಸಲು ರಾತ್ರಿ ವೇಳೆ ಗದ್ದೆಗೆ ತೆರಳಿದ್ದ ರೈತ ವಾಸುದೇವ ಗೌಡ (42) ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ವಂದಿಗೆ ಗ್ರಾ.ಪಂ. ವ್ಯಾಪ್ತಿಯ ಬೋಳೆ ಹೊಸಗದ್ದೆಯಲ್ಲಿ ನಡೆದಿದೆ.

ಘಟನೆ ಹಿನ್ನೆಲೆ: ಫೆ.11ರ ರಾತ್ರಿ 9 ಗಂಟೆ ಸುಮಾರಿಗೆ ವಾಸುದೇವ ಅವರು ಗದ್ದೆಗೆ ನೀರು ಹಾಯಿಸಲು ವಿದ್ಯುತ್ ಪಂಪ್‌ಸೆಟ್ ಚಾಲನೆ ಮಾಡಲು ತೆರಳಿದ್ದರು. ಈ ವೇಳೆ ಕತ್ತಲೆಯಲ್ಲಿ ಕಾಲು ಜಾರಿ ಅಥವಾ ವಿದ್ಯುತ್ ಅವಘಡದಿಂದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಮನೆಗೆ ಬಾರದೇ ಇದ್ದಾಗ ಹುಡುಕಾಡಿದ ಕುಟುಂಬಸ್ಥರಿಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ದಿಕ್ಕಿಲ್ಲದ ಕುಟುಂಬ: ಬೋಳೆ ಹೊಸಗದ್ದೆಯ ನಿವಾಸಿಯಾಗಿದ್ದ ವಾಸುದೇವ, ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಕೃಷಿ ಹಾಗೂ ಕೂಲಿ ಮಾಡಿ ಪತ್ನಿ, ಇಬ್ಬರು ಮಕ್ಕಳನ್ನು ಸಲಹುತ್ತಿದ್ದರು. ಇವರ ಅಕಾಲಿಕ ಸಾವು ಬಡ ಕುಟುಂಬಕ್ಕೆ ದೊಡ್ಡ ಆಘಾತವಾಗಿವೆ.

ತನಿಖೆ-ಸಂತಾಪ: ಮೃತನ ಚಿಕ್ಕಪ್ಪ ಬಾಬು ಸೋಮ ಗೌಡ ದೂರಿನನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಗುರುನಾಥ ಹಾದಿಮನಿ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಸತೀಶ ಸೈಲ್ ಸಂತಾಪ ಸೂಚಿಸಿದ್ದು, ವೈಯಕ್ತಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಹಾಲಕ್ಕಿ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಮೃತರ ಅಂತಿಮ ದರ್ಶನ ಪಡೆದರು.

Share This Article