ಮಿರ್ಜಾನ ಕೋಟೆ ರಸ್ತೆಗೆ ಅಡ್ಡಲಾಗಿ ‘ಗೇಟ್’ ನಿರ್ಮಾಣ: ಸಂಚಾರಕ್ಕೆ ಅಡ್ಡಿ; ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ..

News Desk
1 Min Read

ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆ ಹಾಗೂ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಿ.ಡಬ್ಲ್ಯೂ.ಡಿ ರಸ್ತೆಯಲ್ಲಿ, ಗ್ರಾಮ ಪಂಚಾಯತ್ ವತಿಯಿಂದ ‘ಗೇಟ್’ ಅಳವಡಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ರಸ್ತೆ ಛತ್ರಕೂರ್ವೆ ಗ್ರಾಮದ ಜೀವನಾಡಿಯಾಗಿದೆ. ಇಲ್ಲಿ ಗೇಟ್ ಹಾಕಿದರೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ತುರ್ತು ವಾಹನಗಳ ಮುಕ್ತ ಸಂಚಾರಕ್ಕೆ ಅಡಚಣೆಯಾಗುತ್ತದೆ,” ಎಂದು ಆರೋಪಿಸಿ ಗ್ರಾಮದ 50ಕ್ಕೂ ಹೆಚ್ಚು ಮಂದಿ ಪಿಡಿಒಗೆ ಮನವಿ ಸಲ್ಲಿಸಿದರು.

ಗ್ರಾಮದ ಮುಖಂಡ ವಿನಾಯಕ ಪಟಗಾರ ಮಾತನಾಡಿ, “ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಗೇಟ್ ಅಳವಡಿಸುವುದು ಸರಿಯಲ್ಲ, ಕೂಡಲೇ ಕಾಮಗಾರಿ ನಿಲ್ಲಿಸಿ,” ಎಂದು ಒತ್ತಾಯಿಸಿದರು. ಇನ್ನೋರ್ವ ಮುಖಂಡ ಶಿವಾನಂದ ಮಾತನಾಡಿ, “ಪಂಚಾಯತ್ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ,” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರವಿ, ಚೆನ್ನಪ್ಪ, ಲೋಕೇಶ, ಪುರಸಯ್ಯ, ಗಣೇಶ, ನವೀನ, ಓಮು, ಮಹೆಂದ್ರ ಶಾಂತಿ, ದಾಮೋದರ, ಲಕ್ಷಮಣ, ಗುರುನಾಥ, ರಾಮಚಂದ್ರ ವೆಂಕಟ್ರಮಣ ಹಾಗೂ ಪಂಚಾಯತ್ ಸದಸ್ಯರು ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article