ಅಂಕೋಲಾ: ಹೊನ್ನೇಬೈಲ್ ಗ್ರಾಮದ ಸರ್ವೆ ನಂ.214 ರ ಕೆಲವು ಹಿಸ್ಸಾಗಳಲ್ಲಿ ಪರವಾನಿಗೆ ಪಡೆಯದೆ ಮನೆ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡ ಕಾಮಗಾರಿಗಳನ್ನು ನಡೆಸುತ್ತಿರುವುದು ಸ್ಥಳೀಯರಲ್ಲಿ ಅನುಮಾನ ಮತ್ತು ಆತಂಕವನ್ನು ಉಂಟುಮಾಡಿದೆ. ಈ ಕುರಿತು ಗ್ರಾಮದ ಸ್ಥಳೀಯ ನಿವಾಸಿ ಕೃಷ್ಣ ನಾಗಪ್ಪ ನಾಯ್ಕ ಅವರು ಹೊನ್ನೇಬೈಲ್ ಗ್ರಾಮ ಪಂಚಾಯಿತಿಗೆ ಇಂದು ದೂರು ಸಲ್ಲಿಸಿದ್ದು, ಅನುಮತಿಯಿಲ್ಲದ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರು ಪ್ರಕಾರ, ಸದರಿ ಜಾಗ ನಿರ್ಮಾಣ ನಡೆಸುತ್ತಿರುವವರ ಸ್ವಂತದ್ದಾಗಿದ್ದರೂ ಸಹ, ಯಾವುದೇ ಕಟ್ಟಡ ನಿರ್ಮಿಸಲು ಸಂಬಂಧಿತ ಗ್ರಾಮ ಪಂಚಾಯಿತಿಯಿಂದ ಕಟ್ಟಡ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪರವಾನಿಗೆಯಿಲ್ಲದೆ ಯಾವುದೇ ರೀತಿಯ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದು ಕಾನೂನುಬಾಹಿರವಾಗಿದ್ದು, ಗ್ರಾಮ ಪಂಚಾಯಿತಿಯು ಸ್ಥಳ ಪರಿಶೀಲನೆ ನಡೆಸಿ ಸಂಬಂಧಿತ ಮಾಲೀಕರಿಗೆ ಸೂಕ್ತ ನೋಟಿಸ್ ನೀಡಬೇಕು ಹಾಗೂ ಅಗತ್ಯವಿದ್ದಲ್ಲಿ ಕಾನೂನು ಪ್ರಕಾರ ಕಟ್ಟಡವನ್ನು ನೆಲಸಮ ಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಭೂ ಪರಿವರ್ತನೆ ಮಾಡದೇ ಹಾಗೂ ಪಂಚಾಯಿತಿಯಿಂದ ಅನುಮತಿ ಪಡೆಯದೇ ಕೆಲವರು ನಡೆಸುತ್ತಿರುವ ಈ ಕಾಮಗಾರಿ ಕಾನೂನು ಉಲ್ಲಂಘನೆಯಾಗಿದ್ದು, ಭಾರತದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳು ಪರವಾನಿಗೆಯಿಲ್ಲದೆ ನಿರ್ಮಾಣ ಕಾರ್ಯ ಕೈಗೊಳ್ಳಬಾರದು ಎಂದು ಹಲವಾರು ತೀರ್ಪುಗಳಲ್ಲಿ ಸೂಚಿಸಿರುವುದು ದೂರುದಲ್ಲಿ ಉಲ್ಲೇಖವಾಗಿದೆ.
ಇಂತಹ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಹಾಗೂ ಸಂಬಂಧಿತ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕರ್ನಾಟಕ ಗ್ರಾಮ ಪಂಚಾಯಿತಿ ಕಾಯಿದೆ, ಕರ್ನಾಟಕ ನಗರಾಭಿವೃದ್ಧಿ ಕಾಯಿದೆ ಹಾಗೂ ಸಂಬಂಧಿತ ನ್ಯಾಯಾಲಯದ ಆದೇಶಗಳ ಪ್ರಕಾರ ಪರವಾನಿಗೆಯಿಲ್ಲದೆ ನಿರ್ಮಾಣ ಕಾರ್ಯ ನಡೆಸುವುದು ಅಪರಾಧವಾಗಿದ್ದು, ಗ್ರಾಮ ಪಂಚಾಯಿತಿ ಅಗತ್ಯವಾದ ದಂಡಾತ್ಮಕ ಹಾಗೂ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ಹೊಂದಿದೆ.
ಗ್ರಾಮದ ಶಾಂತಿ, ಸುರಕ್ಷತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ದೂರಿಗೆ ತಕ್ಷಣ ಸ್ಪಂದಿಸಿ, ಪರವಾನಿಗೆಯಿಲ್ಲದೆ ಕಾಮಗಾರಿ ನಡೆಸುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಂತಹ ಅಕ್ರಮಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ವಿಕಾಸ ವಾಹಿನಿ ಈ ವಿಷಯದ ಮೇಲೆ ನಿಗಾ ಇಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕೈಗೊಂಡಿರುವ ಕ್ರಮಗಳನ್ನು ಜನತೆಗೆ ತಿಳಿಸಲು ವರದಿ ನೀಡಲಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ

