(ಅಂಕೋಲಾ-ಜುಲೈ 11): ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ತಹಶೀಲ್ದಾರ್ ಹುದ್ದೆ ಖಾಲಿಯಾಗಿದ್ದು, ಸಾರ್ವಜನಿಕರಿಗೆ ಹಲವು ಸಮಸ್ಯೆ ಎದುರಾದವು. ಕಾರವಾರದಿಂದ ಹೆಚ್ಚುವರಿ ಪ್ರಭಾರವಿಟ್ಟು ಬಂದಿದ್ದ ನಿಶ್ಚಲ ನರೋನಾ ಅವರು ವಾರಕ್ಕೆ ಎರಡು ದಿನ ಮಾತ್ರ ಕಚೇರಿಗೆ ಬರುವುದು ಜನರಿಗೆ ಸಾಕಾಗದ ಸ್ಥಿತಿಯಾಗಿತ್ತು.
ಹೊಸ ತಹಶೀಲ್ದಾರ್ ನೇಮಕ ಯಾವಾಗ ವಾಗುತ್ತದೋ ಎಂಬ ನಿರೀಕ್ಷೆ ಯಲ್ಲಿಯೇ ಜನ ದಿನ ಕಳೆಯುತ್ತಿದ್ದರು.
ಈ ಮಧ್ಯೆ ಜೂನ್ 30 ರಂದು ಬಾಗಲಕೋಟೆ ಮೂಲದ ಯುವ ಅಧಿಕಾರಿ ಡಾ. ಚಿಕ್ಕಪ್ಪ ನಾಯಕ ಅವರು ಅಂಕೋಲಾ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಮೊದಲು ವೈದ್ಯಕೀಯ ಸೇವೆಯಲ್ಲಿ ಇದ್ದು, ಬಳಿಕ ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಆಡಳಿತ ಸೇವೆಗೆ ಬಂದವರು. ಬೆಳಗಾವಿಯ ಬೈಲಹೊಂಗಲದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ, ಇದೀಗ ಅಂಕೋಲಾ ತಾಲೂಕಿಗೆ ಗ್ರೇಡ್ 1 ತಹಶೀಲ್ದಾರರಾಗಿ ನೇಮಕಗೊಂಡಿದ್ದಾರೆ.

ಡಾ. ಚಿಕ್ಕಪ್ಪ ನಾಯಕ ಅಧಿಕಾರ ವಹಿಸಿ ಕೊಂಡಿದ್ದು ಕೇವಲ 12 ದಿನ. ಈಗಾಗಲೇ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಿರುವ ಈ ಯುವ ಅಧಿಕಾರಿ, ಇಂದು ಬೆಳಿಗ್ಗೆ ಕಚೇರಿಯ ದಾಖಲೆ ಕೊಠಡಿಗೆ ಭೇಟಿ ನೀಡಿ ಸಿಬ್ಬಂದಿಗಳ ಚೇರ್ ನಲ್ಲಿ ಕುಳಿತು ಸಾರ್ವಜನಿಕ ಅರ್ಜಿಗಳನ್ನು ತಾವೇ ಸ್ವತಃ ಸ್ವೀಕರಿಸಿದರು. ಕೆಲವು ಸಾರ್ವಜನಿಕರಿಗೆ ಅವರೇ ತಹಶೀಲ್ದಾರರು ಎಂಬುದು ಗೊತ್ತಾಗಲೇ ಇಲ್ಲ. ಬಡವ-ಧನಿಕ ಎಂಬ ಭೇದವಿಲ್ಲದೆ ಎಲ್ಲರ ಮಾತು ಆಲಿಸಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಸಿಬ್ಬಂದಿಗೆ ಅವರು ಸ್ಪಷ್ಟವಾಗಿ ಹೇಳಿದ್ದು: “ಸಾರ್ವಜನಿಕ ಅರ್ಜಿ ತಡವಾದರೆ ನಾನು ಸಹಿಸಲ್ಲ. ಕಡತಗಳನ್ನು ತಕ್ಷಣ ಹುಡುಕಿ, ತಕ್ಷಣ ಸೇವೆ ನೀಡಿ. ಯಾರನ್ನೂ ತೊಂದರೆ ಗೊಳಿಸಬೇಡಿ.” ಜೊತೆಗೆ, ಅರ್ಜಿಗಳನ್ನು ಹೇಗೆ ಸ್ವೀಕರಿಸಿ, ಎಲ್ಲಿ ದಾಖಲೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಕೂಡ ಮಾರ್ಗಸೂಚಿ ನೀಡಿದರು.
ಹೆಚ್ಚು ಸಮಯ ಕಡತ ಕೊಠಡಿಯಲ್ಲಿ ಕಳೆದ ಅವರು, ಎಲ್ಲರ ಕೆಲಸ ನೋಡಿ, ಮಾತು ಕೇಳಿ, ಬಳಿಕ ಸನಿಹದಲ್ಲಿದ್ದವರು ಹೇಳಿದಂತೆ ಒಂದು ಸಣ್ಣ ನಗೆ ಬಿರುತ್ತಾ ಅಲ್ಲಿಂದ ಹೊರಟರು. ಕೆಲವರು ನಂತರ ತಿಳಿದುಕೊಂಡರು—ಅವರು ಅಂಕೋಲಾದ ನೂತನ ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಎಂದು.

ಈ ಯುವ ಅಧಿಕಾರಿ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನವಾಗಿ ಗೌರವ ನೀಡಿ ಮಾತ ನಾಡುತ್ತಿದ್ದಾರೆ. ಅವರು ಕೊಡುತ್ತಿರುವ ಕಾನೂನಾತ್ಮಕ ಸಲಹೆಗಳು ಜನರಿಗೆ ಸ್ಪಷ್ಟವಾಗಿವೆ. ದಿನವೂ ನೂರಾರು ಮಂದಿ ಅವರ ಬಳಿ ಹೋಗಿ ಸಮಸ್ಯೆ ಹೇಳಿ ಕೊಳ್ಳುತ್ತಿದ್ದಾರೆ. ಇವರ ಶಿಸ್ತಿನ ಕೆಲಸದ ಶೈಲಿ, ಸರಳ ನಡವಳಿಕೆ ಹಾಗೂ ಸಮರ್ಪಿತ ಸೇವೆ ಜನರ ಹೃದಯ ಗೆದ್ದಿದೆ.
ಅವರ ಕಾರ್ಯ ಶೈಲಿ ನೋಡಿದಾಗ 2018ರ “ಭರತ್ ಅನೆ ನೇನು ” ಸಿನಿಮಾ ನೆನಪಾಗುತ್ತದೆ. ಸಿನಿಮಾದ ನಾಯಕ ಮಹೇಶ್ ಬಾಬುನಂತೆ—ಇವರು ಕೂಡ ಅಧಿಕಾರ ಬಳಸಿಕೊಂಡು ಬೆದರಿಸುತ್ತಿಲ್ಲ, ಬದಲಿಗೆ ಜನರ ಸೇವೆಗೆ ತಮ್ಮನ್ನು ಮೀಸಲಿಟ್ಟಿದ್ದಾರೆ.
ಅಂಥಾ ಅಧಿಕಾರಿಗಳು ಅಂಕೋಲಾದ ಮಣ್ಣಿಗೆ ಬಂದಿದ್ದಾರೆ ಎಂಬುದು ಇಲ್ಲಿನ ಜನತೆಗೆ ನಿಜಕ್ಕೂ ಸಂತಸದ ವಿಷಯ. ಈ ಶ್ರದ್ಧಾ, ಈ ಶಿಸ್ತು ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಹಾರೈಕೆ.
ವರದಿ : ಕಿರಣ ಚಂದ್ರಹಾಸ ಗಾಂವಕರ್

