ಡ್ರೈವರ್ ಸೀಟಿನಲ್ಲಿರಬೇಕಾದ ಶವ ಹಿಂಬದಿ ಸೀಟಿಗೆ ಬಂದಿದ್ದೇಗೆ? ‘ಅಪಘಾತ’ದ ನೆಪದಲ್ಲಿ ವ್ಯವಸ್ಥಿತ ಕೊಲೆ ಶಂಕೆ..?

News Desk
2 Min Read

ಯಲ್ಲಾಪುರ: ರಸ್ತೆ ಬದಿಯ ತಗ್ಗಿಗೆ ಕಾರು ಬಿದ್ದು, ಬೆಂಕಿ ಹೊತ್ತಿಕೊಂಡು ಯುವಕನೊಬ್ಬ ಸಜೀವ ದಹನವಾಗಿದ್ದಾನೆ ಎಂದು ನಂಬಲಾಗಿದ್ದ ಪ್ರಕರಣ ಇದೀಗ ಭಾರಿ ತಿರುವು ಪಡೆದುಕೊಂಡಿದೆ. ಸುಟ್ಟ ಕಾರಿನ ಹಿಂಬದಿ ಸೀಟಿನಲ್ಲಿ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೇ ಕೊಲೆ ಮಾಡಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತನ ತಂದೆ ನೀಡಿದ ದೂರಿನನ್ವಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇದೀಗ ‘ಕೊಲೆ’ ಹಾಗೂ ‘ಸಾಕ್ಷ್ಯ ನಾಶ’ದ ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿ ನಿವಾಸಿ ನಿತೇಶ್ ಜಗನ್ನಾಥ ಧಾಪಳೆ (35) ಮೃತಪಟ್ಟ ದುರ್ದೈವಿ. ಈತನ ತಂದೆ ಜಗನ್ನಾಥ ರಾಹು ಧಾಪಳೆ ಅವರು ನೀಡಿದ ದೂರಿನ ಆಧಾರದ ಮೇಲೆ, ನಯೀಮ್ ಹಾಗೂ ಆತನ ಗೆಳೆಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತದ ಕಥೆಗೆ ತಿರುವು ನೀಡಿದ ಹಿಂಬದಿ ಸೀಟು:

ಏಪ್ರಿಲ್ 8 ರಂದು ಮುಂಜಾನೆ ಯಲ್ಲಾಪುರ ತಾಲೂಕಿನ ತಾಳಿಕುಂಬ್ರಿ ಬಸ್ ನಿಲ್ದಾಣದ ಎದುರು ಕಾರೊಂದು (ಕೆಎ-04 ಎಮ್ ಜೆ-8986) ಬಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆರಂಭದಲ್ಲಿ ಇದನ್ನು ಅತಿವೇಗದ ಚಾಲನೆಯಿಂದಾದ ಆಕಸ್ಮಿಕ ಅಪಘಾತ ಎಂದೇ ಭಾವಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ, ಮರುದಿನ (ಏ. 9) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಚಾಲಕನ ಸೀಟಿನಲ್ಲಿ ಇರಬೇಕಾದ ಶವ ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು. ಇದೇ ಅಂಶ ಪ್ರಕರಣದ ದಿಕ್ಕನ್ನು ಬದಲಿಸಿದೆ. ಅಲ್ಲದೇ, ಘಟನೆಗೂ ಹಿಂದಿನ ದಿನ (ಏ. 7) ಮಧ್ಯಾಹ್ನ ನಿತೇಶ್ ತನ್ನ ಪತ್ನಿಗೆ ವಾಟ್ಸಾಪ್ ಕರೆ ಮಾಡಿ, ತಾನು ನಯೀಮ್ ಎಂಬಾತನ ಜೊತೆ ಗೋವಾಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದ ಅಂಶವೂ ತನಿಖೆಗೆ ಹೊಸ ಆಯಾಮ ನೀಡಿದೆ.

ದೂರಿನಲ್ಲಿರುವ ಗಂಭೀರ ಆರೋಪ: ಹಿಂಬದಿ ಸೀಟಿನಲ್ಲಿ ಶವ ಸಿಕ್ಕಿರುವುದು ಹಾಗೂ ಸೊಸೆ ನೀಡಿದ ಮಾಹಿತಿಯನ್ನು ಆಧರಿಸಿ, ಜಗನ್ನಾಥ ಅವರು ಏಪ್ರಿಲ್ 10 ರಂದು ಯಲ್ಲಾಪುರ ಠಾಣೆಗೆ ಹಾಜರಾಗಿ ಮುಂದುವರೆದ ದೂರು ನೀಡಿದ್ದಾರೆ. “ನಯೀಮ್ ಮತ್ತು ಆತನ ಗೆಳೆಯರೇ ಸೇರಿ ಎಲ್ಲೋ ಬೇರೆ ಕಡೆ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಬಳಿಕ, ಯಾರಿಗೂ ಗೊತ್ತಾಗಬಾರದು ಎಂದು ಶವವನ್ನು ಕಾರಿನ ಹಿಂಬದಿ ಸೀಟಿನಲ್ಲಿ ತಂದು, ಅಪಘಾತದಂತೆ ಬಿಂಬಿಸಲು ತಗ್ಗಿಗೆ ತಳ್ಳಿ ಬೆಂಕಿ ಹಚ್ಚಿದ್ದಾರೆ” ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಚುರುಕುಗೊಂಡ ತನಿಖೆ: ದೂರುದಾರರ ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಯಲ್ಲಾಪುರ ಪೊಲೀಸರು ಈ ಹಿಂದಿನ ಅಪಘಾತ ಪ್ರಕರಣಕ್ಕೆ ಇದೀಗ ಬಿ.ಎನ್.ಎಸ್-2023 ರ ಕಲಂ 103 ಹಾಗೂ 238 ಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರಕರಣವು ಪ್ರಸ್ತುತ ತನಿಖಾ ಹಂತದಲ್ಲಿದ್ದು, ಆರೋಪಿತರ ಬಂಧನ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಈ ನಿಗೂಢ ಪ್ರಕರಣದ ಹಿಂದಿನ ಅಸಲಿ ಸತ್ಯ ಬಯಲಾಗಬೇಕಿದೆ.

Share This Article
Leave a Comment