ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಒಂದರ ಕಚೇರಿಯ ಕಿಟಕಿ ಸರಳು ಕತ್ತರಿಸಿ, ನಗದು ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಮಟಾ ತಾಲೂಕಿನ ವನ್ನಳ್ಳಿ ಕಲ್ಗುಡ್ಡೆಯ ನಿವಾಸಿ ಅಸ್ಲಂ ತಂದೆ ಮಹಮ್ಮದ್ ಹನೀಫ ದಂಡು (18 ವರ್ಷ) ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು (17 ವರ್ಷ) ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ: ದಿನಾಂಕ ಫೆಬ್ರವರಿ 1 ರ ರಾತ್ರಿ 10 ಗಂಟೆಯಿಂದ ಫೆಬ್ರವರಿ 2 ರ ಬೆಳಿಗ್ಗೆ 6.15 ರ ಅವಧಿಯಲ್ಲಿ, ಕಳ್ಳರು ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಆಫೀಸಿನ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದರು. ಕಚೇರಿಯಲ್ಲಿದ್ದ ಕಪಾಟಿನ ಲಾಕರ್ ಬಾಗಿಲನ್ನು ಮೀಟಿ ತೆರೆದು, ಅದರಲ್ಲಿದ್ದ 25,000 ರೂ. ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯ್ದೆಯಡಿ (ಗುನ್ನಾ ನಂ: 30/2026) ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ಮತ್ತು ಜಪ್ತಿ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಮಟಾ ಸಿಪಿಐ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರು, ಇಂದು (ಫೆ.11) ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಸುಮಾರು 3 ಲಕ್ಷ ರೂ. ಮೌಲ್ಯದ ಎರಡು ಸುಝುಕಿ ಬರ್ಗ್‌ಮನ್ ಸ್ಕೂಟರ್‌ಗಳು, ಕಳ್ಳತನಕ್ಕೆ ಬಳಸಿದ ಆಯುಧಗಳು ಹಾಗೂ ಕಳವು ಮಾಡಲಾದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತಂಡಕ್ಕೆ ಶ್ಲಾಘನೆ: ಈ ಪತ್ತೆ ಕಾರ್ಯದಲ್ಲಿ ಕುಮಟಾ ಸಿಪಿಐ ಯೋಗೇಶ ಕೆ.ಎಂ., ಪಿ.ಎಸ್.ಐ.ಗಳಾದ ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ, ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ, ಚಿದಾನಂದ ನಾಯ್ಕ, ಗಿರೀಶ ನಾಯ್ಕ, ಹರೀಶ ನಾಯಕ, ಅರುಣ ನಾಯ್ಕ ಹಾಗೂ ವಾಹನ ಚಾಲಕ ಮಾರುತಿ ಗಾಳಪೂಜಿ ಅವರುಗಳನ್ನೊಳಗೊಂಡ ತಂಡ ಶ್ರಮಿಸಿದೆ.
ಪೊಲೀಸ್ ತಂಡದ ಈ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್ಪಿ ಮಹೇಶ ಎಂ.ಕೆ. ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲೂ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

