ಅಂಕೋಲಾ: ಶೆಟಗೇರಿ ಬಸ್ ತಂಗುದಾಣದಲ್ಲಿ ಮದ್ಯದ ಬಾಟಲಿಗಳ ರಾಶಿ, ನಿರ್ವಹಣೆ ಕೊರತೆ: ರೋಗಭೀತಿ..

News Desk
1 Min Read

ಅಂಕೋಲಾ (ಜುಲೈ 10, 2025): ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ರೋಗರುಜಿನಗಳಿಗೆ ಆಹ್ವಾನ ನೀಡುವ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಂಗುದಾಣದ ತುಂಬೆಲ್ಲಾ ಬಿದ್ದಿರುವ ಖಾಲಿ ಬಿಯರ್ ಬಾಟಲಿಗಳು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಸುತ್ತಮುತ್ತಲಿನ ಪರಿಸರ ಹಾಳಾಗಿದ್ದು, ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿದಿನ ನೂರಾರು ಪ್ರಯಾಣಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಈ ಬಸ್ ತಂಗುದಾಣ ವನ್ನು ಆಶ್ರಯಿಸುತ್ತಾರೆ.

ಆದರೆ, ತಂಗುದಾಣದ ಒಳಗಡೆ ಮತ್ತು ಸುತ್ತಮುತ್ತ ವಿಪರೀತ ಕೊಳಕು ತುಂಬಿಕೊಂಡಿದೆ. ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳು, ಮತ್ತು ಇತರೆ ಕಸ ಕಡ್ಡಿಗಳು ಎಲ್ಲೆಂದರಲ್ಲಿ ಬಿದ್ದಿದ್ದು, ನೈರ್ಮಲ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ರಾತ್ರಿ ವೇಳೆ ಕೆಲವರು ತಂಗುದಾಣವನ್ನು ಮದ್ಯಪಾನಕ್ಕೆ ಬಳಸುತ್ತಿದ್ದು, ಬೆಳಿಗ್ಗೆ ಬಿಟ್ಟುಹೋಗುವ ಖಾಲಿ ಬಾಟಲಿಗಳು ಮತ್ತು ಉಳಿದ ಕಸ ಪ್ರಯಾಣಿ ಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ.

“ಬಸ್ ಕಾಯಲು ಇಲ್ಲಿ ನಿಲ್ಲುವುದೇ ಭಯ ವಾಗುತ್ತದೆ. ಸುತ್ತಲೂ ಕಸ ಮತ್ತು ಬಿಯರ್ ಬಾಟಲಿಗಳ ರಾಶಿ. ಸೊಳ್ಳೆಗಳು ಹೆಚ್ಚಾಗಿವೆ. ರೋಗಗಳು ಬರುವ ಅಪಾಯವಿದೆ” ಹಾಗೂ ಮಹಿಳಾ ಪ್ರಯಾಣಿಕರಿಗೂ ಇದು ಸುರಕ್ಷಿತ ವಾತಾವರಣವಲ್ಲ ಎಂದು ಹಲವರು ದೂರಿದ್ದಾರೆ.

ತಂಗುದಾಣದ ನಿರ್ವಹಣೆಯ ಸಂಪೂರ್ಣ ಕೊರತೆ ಎದ್ದು ಕಾಣುತ್ತಿದೆ. ಬಸ್ ಶೆಲ್ಟರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ಸ್ವಚ್ಛತೆಯ ಕೊರತೆಯಿಂದಾಗಿ ದುರ್ವಾಸನೆ ಸೂಸುತ್ತಿದೆ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತಿದೆ. ಇಂತಹ ಪರಿಸರದಲ್ಲಿ ಪ್ರಯಾಣಿಕರು, ಅದರಲ್ಲೂ ಮಕ್ಕಳು ಮತ್ತು ವೃದ್ಧರು ಕುಳಿತುಕೊಳ್ಳುವುದು ಅವರ ಆರೋಗ್ಯಕ್ಕೆ ಮಾರಕವಾಗಬಹುದು. ಡೆಂಗ್ಯೂ, ಮಲೇರಿಯಾ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಸಂಬಂಧ ಪಟ್ಟವರು ಬಸ್ ತಂಗುದಾಣವನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಬೇಕು, ಅನೈತಿಕ ಚಟುವಟಿಕೆ ಗಳನ್ನು ತಡೆಯಬೇಕು ಮತ್ತು ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ, ಬರುವ ದಿನಗಳಲ್ಲಿ ಇದು ಇನ್ನಷ್ಟು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article