ಅಲಗೇರಿ: ಶೋಭಾಯಾತ್ರೆ, ಧಾರ್ಮಿಕ ಚಿಂತನ; ಶ್ರೀ ಸಣ್ಣಮ್ಮ ದೇವಸ್ಥಾನದ ಆವರಣದಲ್ಲಿ ಜರುಗಿದ ಬ್ರಹತ್ ಹಿಂದೂ ಸಮ್ಮೇಳನ..

News Desk
1 Min Read

ಅಂಕೋಲಾ (ಅಲಗೇರಿ): ಸಿದ್ದಾಪುರದ ಶ್ರೀ ಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಾನುವಾರ (ಫೆ. 08) ಇಲ್ಲಿನ ಶ್ರೀ ಸಣ್ಣಮ್ಮ ದೇವಸ್ಥಾನದ ಆವರಣದಲ್ಲಿ ಬೃಹತ್ ಹಿಂದೂ ಸಮ್ಮೇಳನ ಜರುಗಿತು. ಸುಮಾರು 800ಕ್ಕೂ ಅಧಿಕ ಜನರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಅಲಗೇರಿಯ ಶ್ರೀ ಈಶ್ವರ ದೇವಸ್ಥಾನದಿಂದ ಸಭಾ ಸ್ಥಳವಾದ ಶ್ರೀ ಸಣ್ಣಮ್ಮ ದೇವಸ್ಥಾನದವರೆಗೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯು ಕಾರ್ಯಕ್ರಮಕ್ಕೆ ಚಾಲನೆ ನೀಡಿತು.

ಧರ್ಮ ಜಾಗೃತಿ ಮತ್ತು ಆಶೀರ್ವಚನ: ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜದ ಸಂಘಟನೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಪಾಲ್ಗೊಂಡಿದ್ದ ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ್ಯದ ಉಪಾಧ್ಯಕ್ಷರಾದ ಗಂಗಾಧರ್ ಹೆಗಡೆ ಅವರು, ಪ್ರಸ್ತುತ ಸನ್ನಿವೇಶ ಮತ್ತು ಸಂಘಟನಾತ್ಮಕ ವಿಚಾರಗಳ ಕುರಿತು ವಿಷಯ ಮಂಡಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಹಿಂದೂ ಸಮ್ಮೇಳನದ ಅಧ್ಯಕ್ಷರಾದ ನಾಗೇಶ ನಾಯ್ಕ, ಅಲಗೇರಿ ಮಂಡಲದ ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಗಣೇಶ ಚಿನ್ನಾ ನಾಯ್ಕ ಹಾಗೂ ಅಲಗೇರಿ ಮಂಡಲದ ಹಿಂದೂ ಉತ್ಸವ ಸಮಿತಿಯ ಮಹಿಳಾ ಸದಸ್ಯರಾದ ಶೋಭಾ ಆಗೇರ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಅಲಗೇರಿಯ ಬಾಲಕಿಯರ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ನಾಗರಾಜ ಶಾಂಬಾ ನಾಯ್ಕ ನಿರೂಪಿಸಿದರು. ಸುರೇಶ ವೆರ್ಣೇಕರ ವಂದಿಸಿದರು.

Share This Article