ಮಧುಗಿರಿ: ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಪ್ರಕರಣ; ಶಿಕ್ಷಕಿ ಅಮಾನತು, ಆರೋಪಿ ಬಿಇಓ ಕಚೇರಿ ಸಿಬ್ಬಂದಿಗೆ ಯಾಕಿಲ್ಲ ಶಿಕ್ಷೆ?

News Desk
2 Min Read

ಮಧುಗಿರಿ : ಮಧುಗಿರಿ ಪಟ್ಟಣದ ಶಿರಾಗೇಟ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣವು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಶಾಲೆಯ ಸಹ ಶಿಕ್ಷಕಿ ಸುಶೀಲಾದೇವಿ ಪಿ.ಎನ್. ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ, ಶಾಲೆಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ನೇರವಾಗಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ, ಶಿಕ್ಷಕಿಯ ಮಗ ಹಾಗೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ (BEO) ದ್ವಿತೀಯ ದರ್ಜೆ ಸಹಾಯಕ (SDA) ಅನೂಪ್ ವಿರುದ್ಧ ಇಲಾಖೆ ಇನ್ನೂ ಯಾವುದೇ ಶಿಸ್ತುಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಕರಣದ ಹಿನ್ನೆಲೆ: ಶಾಲೆಯ ವಿದ್ಯಾರ್ಥಿನಿ ಯರಾದ ಕುಮಾರಿ ಇಂಚರ, ಮಾನ್ಯ, ವೆನ್ನೆಲ್ಲಾ ಮತ್ತು ವರಲಕ್ಷ್ಮಿ ಅವರು ಪಾಠದ ವಿಚಾರವಾಗಿ ಸಹ ಶಿಕ್ಷಕಿ ಸುಶೀಲಾದೇವಿ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಶಿಕ್ಷಕಿಯು, ಬಿಇಓ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರಾಗಿರುವ ತನ್ನ ಮಗ ಅನೂಪ್‌ ಅವರನ್ನು ಶಾಲೆಗೆ ಕರೆಸಿದ್ದಾರೆ. ಬಳಿಕ, ತಾಯಿಯ ಪ್ರಚೋದನೆಯಂತೆ ಅನೂಪ್ ಅವರು ನಾಲ್ವರು ವಿದ್ಯಾರ್ಥಿನಿಯರನ್ನು ಶಾಲಾ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ‘ಕರ್ನಾಟಕ ರಣಧೀರರ ವೇದಿಕೆ’ಯು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದೆ.

ಘಟನೆ ಸಂಬಂಧ ಶಾಲೆಯ ಮುಖ್ಯೋ ಪಾಧ್ಯಾಯರು ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಲಾಖೆಯ ಗಮನಕ್ಕೂ ತಂದಿದ್ದರು. ಸಾರ್ವಜನಿಕ ಒತ್ತಡ ಹಾಗೂ ಸಂಘಟನೆಗಳ ದೂರಿನ ಫಲವಾಗಿ, ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷಕಿ ಸುಶೀಲಾದೇವಿ ಅವರನ್ನು ಇಲಾಖಾ ತನಿಖೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ.

ಆದರೆ, ಸ್ವತಃ ಶಿಕ್ಷಣ ಇಲಾಖೆಯಲ್ಲೇ (ಬಿಇಓ ಕಚೇರಿ) ಸರ್ಕಾರಿ ನೌಕರನಾಗಿದ್ದುಕೊಂಡು, ಶಾಲೆಗೆ ಅಕ್ರಮವಾಗಿ ಪ್ರವೇಶಿಸಿ, ಮಕ್ಕಳನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ ಗಂಭೀರ ಆರೋಪ ಹೊತ್ತಿರುವ ಅನೂಪ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದೇ ಪ್ರಕರಣದಲ್ಲಿ ತಾಯಿಯನ್ನು ಅಮಾನತುಗೊಳಿಸಿ, ನೇರ ಆರೋಪಿಯಾಗಿರುವ ಮಗನಿಗೆ ರಕ್ಷಣೆ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

“ಒಬ್ಬ ಸರ್ಕಾರಿ ನೌಕರನು ಶಾಲಾ ಮಕ್ಕಳ ಮೇಲೆ ಹಲ್ಲೆ ನಡೆಸುವುದು ಅತ್ಯಂತ ಖಂಡನೀಯ ಅಪರಾಧ. ಪ್ರಚೋದನೆ ನೀಡಿದ ಶಿಕ್ಷಕಿಯನ್ನೇ ಅಮಾನತು ಮಾಡಿರುವಾಗ, ಹಲ್ಲೆ ಮಾಡಿದ ಅಧಿಕಾರಿಯನ್ನು ಯಾಕೆ ಇನ್ನೂ ಹುದ್ದೆಯಲ್ಲಿ ಮುಂದುವರಿಸಲಾಗಿದೆ? ಬಿಇಓ ಕಚೇರಿಯಲ್ಲೇ ಕೆಲಸ ಮಾಡುತ್ತಿರುವುದರಿಂದ ಇಲಾಖೆ ಅವರಿಗೆ ಅಭಯ ಹಸ್ತ ನೀಡಿದೆಯೇ?,” ಎಂದು ಕರ್ನಾಟಕ ರಣಧೀರರ ವೇದಿಕೆಯ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ, ಶಿಕ್ಷಕಿ ಅಮಾನತಾಗಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಇನ್ನೂ ತನ್ನ ಹುದ್ದೆಯಲ್ಲಿ ಮುಂದುವರಿದಿರುವುದು ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿ ಸಿಬ್ಬಂದಿ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

Share This Article