ಅಂಕೋಲಾ, ಅ. 9: ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ವೆಂಕಟೇಶ ಆರ್. ಅವರು ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ, ಅವರ ಮೇಲಾಧಿಕಾರಿಯಾದ ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಣಧೀರರ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ. ಸಂಘಟನೆಯ ಪರವಾಗಿ ಸೂರಜ್ ನಾಯ್ಕ ನೇತೃತ್ವದ ಪ್ರತಿನಿಧಿ ಮಂಡಳಿ ಇಂದು ಅಂಕೋಲಾ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿ ಕಾರವಾರರಿಗೆ ಮನವಿ ಸಲ್ಲಿಸಿತು.
ಮನವಿಯ ಪ್ರಕಾರ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿದ್ದ ವೆಂಕಟೇಶ ಆರ್. ಅವರು ತಮ್ಮ ಮೇಲಾಧಿಕಾರಿಯಿಂದ ನಾಲ್ಕು ಲಕ್ಷ ರೂಪಾಯಿ ಲಂಚದ ಬೇಡಿಕೆ, ಅಶ್ಲೀಲ ಪದ ಬಳಕೆ, ಜಾತಿ ನಿಂದನೆ ಮತ್ತು ಅವಮಾನಕಾರಿ ವರ್ತನೆಗೆ ಒಳಗಾಗಿದ್ದಾಗಿ ಪತ್ರ ಬರೆದು ಬಳಿಕ ನಾಪತ್ತೆಯಾಗಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಂಘಟನೆಯು ತಿಳಿಸಿದೆ.

ಕರ್ನಾಟಕ ರಣಧೀರರ ವೇದಿಕೆ ಮನವಿಯಲ್ಲಿ, ಒಬ್ಬ ಸರ್ಕಾರಿ ಮೇಲಾಧಿಕಾರಿ ತನ್ನ ಅಧೀನ ಸಿಬ್ಬಂದಿಯ ತಪ್ಪು ಕಂಡುಬಂದಲ್ಲಿ ಕಾನೂನಾತ್ಮಕವಾಗಿ ನೋಟಿಸ್ ನೀಡುವುದು ಅಥವಾ ಶಿಸ್ತು ಕ್ರಮ ಕೈಗೊಳ್ಳುವುದು ಸರಿಯಾದ ವಿಧಾನವಾದರೂ, ಅವಾಚ್ಯ ಪದಗಳಿಂದ ನಿಂದಿಸುವುದು ಮತ್ತು ಮಾನಸಿಕ ಹಿಂಸೆ ನೀಡುವುದು ಕಾನೂನಾತೀತವಾಗಿದ್ದು ಮಾನವ ಹಕ್ಕು ಉಲ್ಲಂಘನೆಗೆ ಸಮಾನವಾಗಿದೆ ಎಂದು ಹೇಳಿದೆ. ಅಂಕೋಲಾ ಪುರಸಭೆಯಲ್ಲಿ ಅಧಿಕಾರ ವಹಿಸಿದ್ದ ಅವಧಿಯಲ್ಲಿಯೂ ಸಹ ಎಂ.ಆರ್. ಸ್ವಾಮಿ ಅವರು ಕೆಳಹಂತದ ಅಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಘಟನೆಗಳನ್ನು ಸ್ಥಳೀಯರು ಮತ್ತು ಸಿಬ್ಬಂದಿಗಳು ಕಣ್ಣಾರೆ ಕಂಡಿದ್ದಾರೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
ಈ ಹಿಂದೆ ಮಂಗಳೂರು ಜಿಲ್ಲೆಯ ಕಿನ್ನಿಗೋಳಿ ಪುರಸಭೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಎಂ.ಆರ್. ಸ್ವಾಮಿ ಅಮಾನತ್ತುಗೊಂಡಿದ್ದರು ಎಂಬುದು ದಾಖಲೆಯಾಗಿದೆ. ಬಳಿಕ ಅವರನ್ನು ಕುಮಟಾಕ್ಕೆ ವರ್ಗಾವಣೆ ಮಾಡಲಾಗಿದ್ದು, ಈಗ ಮತ್ತೊಮ್ಮೆ ಇದೇ ರೀತಿಯ ಆರೋಪ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಘಟನೆಯು ಜಿಲ್ಲಾಡಳಿತವನ್ನು ಉದ್ದೇಶಿಸಿ, ಎಂ.ಆರ್. ಸ್ವಾಮಿ ಅವರನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು, ಪುರಸಭೆಯ ಸಿಸಿಟಿವಿ ದೃಶ್ಯಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿ ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು ಹಾಗೂ ವೆಂಕಟೇಶ ಅವರ ಪತ್ತೆಗಾಗಿ ತ್ವರಿತ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

“ಒಬ್ಬ ನೌಕರ ಮನನೊಂದು ಅನಾಹುತಕ್ಕೊಳಗಾದರೆ ಅದರ ನೈತಿಕ ಹಾಗೂ ಕಾನೂನಾತ್ಮಕ ಹೊಣೆಗಾರಿಕೆ ಮೇಲಾಧಿಕಾರಿಯ ಮೇಲೇ ಬರುವಂತಾಗುತ್ತದೆ” ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮನವಿಯನ್ನು ಕರ್ನಾಟಕ ರಣಧೀರರ ವೇದಿಕೆಯ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಸುಪ್ರಿಯಾ ನಾಯ್ಕ್ ಓದಿ ಹೇಳಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ರಣಧೀರರ ವೇದಿಕೆಯ ಜಿಲ್ಲಾಧ್ಯಕ್ಷ ಸುರಜ ನಾಯ್ಕ್, ಮಾಹಿತಿ ಹಕ್ಕು ಕಾರ್ಯಕರ್ತ ಚೇತನ್ ನಾಯಕ್, ರಣಧೀರರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕಿರಣ್ ಗಾಂವಕರ್, ಹಾಗೂ ಜಿಲ್ಲಾ ಸದಸ್ಯರಾದ ಐಶ್ವರ್ಯ ನಾಯ್ಕ್, ವಿವೇಕ್ ಐಗಳ, ಮಹೇಶ್ ಗೌಡ, ಸುಭಾಷ ನಾಯ್ಕ, ರಘುನಾಥ ನಾಯ್ಕ, ಚರಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ಹಕ್ಕುಗಳು ಮತ್ತು ಗೌರವವನ್ನು ಕಾಪಾಡುವುದು ಆಡಳಿತದ ಕರ್ತವ್ಯವಾಗಿದೆ. ಜನರ ನಂಬಿಕೆಯನ್ನು ಉಳಿಸಲು ಮತ್ತು ನೌಕರರ ಮಾನವೀಯ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಣಧೀರರ ವೇದಿಕೆ ಆಗ್ರಹಿಸಿದೆ.
ವರದಿ: ಕಿರಣ ಗಾಂವಕರ

