ಅಂಕೋಲಾ: ಅಭಿವೃದ್ಧಿಯ ಹಾದಿಯಲ್ಲಿ ನಂಬಿಕೆಯ ಬೆಳಕು ಹರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಣಿಯಾಗಿ ಹೆಸರು ಮಾಡಿದ ಹಶ್ಮತ್ ಪರ್ವೀನ್ ಖಾನ್ ಅವರು, ಅಂಕೋಲಾ ತಾಲೂಕಿನ ಹೊನ್ನೇಬೈಲ್ ಗ್ರಾಮ ಪಂಚಾಯಿತಿಯಿಂದ ಬೆಳಸೆ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 8 ವರ್ಷ 11 ತಿಂಗಳುಗಳ ಕಾಲ ಹೊನ್ನೇಬೈಲ್ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿದ ಅವರು, ಗ್ರಾಮಾಭಿವೃದ್ಧಿಗೆ ನೀಡಿದ ಕೊಡುಗೆಯಿಂದ ಜನಮನ ಗೆದ್ದಿದ್ದಾರೆ.
ನಿನ್ನೆ ದಿನಾಂಕ8-10-2025 ರಂದು ಹೊನ್ನೇಬೈಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರಳ ಆದರೆ ಭಾವಪೂರ್ಣ ಸಮಾರಂಭದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೆನಪಿನ ಕಾಣಿಕೆ ನೀಡಿ ಹಶ್ಮತ್ ಮೇಡಂ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

2016ರ ಅಕ್ಟೋಬರ್ 28ರಂದು ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ಸ್ವೀಕರಿಸಿದ ಹಶ್ಮತ್ ಪರ್ವೀನ್ ಖಾನ್ ಅವರ ಅವಧಿಯಲ್ಲಿ ಹೊಸ ಪಂಚಾಯಿತಿ ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ, ಬೀದಿ ದೀಪ ಅಳವಡಿಕೆ, ಅಂಗನವಾಡಿ ಕೇಂದ್ರಗಳ ದುರಸ್ತಿ, ತಾಜ್ಯ ವಿಲೇವಾರಿ ಘಟಕದ ಸ್ಥಾಪನೆ, ಹಾಗೂ 15ನೇ ಹಣಕಾಸು ಮತ್ತು ನರೇಗಾ ಯೋಜನೆಗಳ ಯಶಸ್ವೀ ಅನುಷ್ಠಾನ ಸೇರಿದಂತೆ ಹಲವಾರು ಕಾರ್ಯಗಳು ನಡೆದಿವೆ. ಅವರ ಶ್ರಮದಿಂದಲೇ ಹೊನ್ನೇಬೈಲ್ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರ ಪಡೆದಿತು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಾದೇವ್ ಗುನುಗರವರು ಮಾತನಾಡಿ, “ನಮ್ಮ ಹಸ್ಮಿತ ಮೇಡಂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಸದಸ್ಯರ ಹಿತಾಸಕ್ತಿಯನ್ನು ಕಾಪಾಡುತ್ತಾ ಎಲ್ಲರಿಗೂ ಆತ್ಮೀಯತೆಯಿಂದ ವರ್ತಿಸಿದ್ದಾರೆ. ಅವರ ತೆರಳಿಕೆಯಿಂದ ನಮ್ಮ ಕುಟುಂಬದ ಒಬ್ಬರನ್ನು ಕಳೆದುಕೊಂಡಂತೆ ಅನಿಸುತ್ತದೆ,” ಎಂದು ಭಾವುಕರಾದರು.
ಕಾರ್ಯದರ್ಶಿ ಗಣಪತಿ ನಾಯ್ಕ ಅವರು ಹೇಳಿದರು, “ಹಶ್ಮತ್ ಮೇಡಂ ಸಿಬ್ಬಂದಿಯನ್ನು ತಮ್ಮ ಕುಟುಂಬದ ಸದಸ್ಯರಂತೆ ಬೆರೆತು ಕೆಲಸ ಮಾಡಿಸಿಕೊಂಡರು. ಯಾವುದೇ ಒತ್ತಡ ಬಂದರೂ ಶಾಂತವಾಗಿ ಎದುರಿಸಿ, ನಮ್ಮಿಗೆ ಮಾರ್ಗದರ್ಶನ ನೀಡಿದವರು,” ಎಂದರು.

ಹಾಲಿ ಪಂಚಾಯಿತಿ ಅಧ್ಯಕ್ಷ ವೆಂಕಟರಮಣ ನಾಯ್ಕ ಅವರು ಮಾತನಾಡಿ, “ಹಸ್ಮಿತ ಮೇಡಂ ಅತ್ಯುತ್ತಮ ಕೆಲಸಗಾರ್ತಿ. ಅವರ ಅವಧಿಯಲ್ಲಿ ಪಂಚಾಯಿತಿ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಪಾದಾರ್ಪಣೆ ಮಾಡಿತು. ಅವರ ಮುಂದಿನ ಸೇವೆ ಇನ್ನೂ ಉನ್ನತ ಹುದ್ದೆಯಲ್ಲಿ ಇರಲಿ,” ಎಂದು ಹಾರೈಸಿದರು.
ಸ್ವತಃ ಹಶ್ಮತ್ ಪರ್ವೀನ್ ಖಾನ್ ಅವರು ಮಾತನಾಡಿ, “ಈ ಎಂಟು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಲು ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಸಹಕಾರವೇ ನನ್ನ ಶಕ್ತಿ. ನನ್ನ ಪತಿ ಇಸ್ಮಾಯಿಲ್ ಶೇಖ, ಕರಾವಳಿ ಕಾವಲು ಪಡೆಯಲಿ ಪೊಲೀಸ್ ಅಧಿಕಾರಿ ಆಗಿದ್ದು, ಅವರ ಪ್ರೋತ್ಸಾಹವೇ ನನ್ನ ಪ್ರೇರಣೆ. ಆದರೆ ಒಂದು ಕೊರಗು ಮಾತ್ರ ಉಳಿದಿದೆ — ಮಂಜುಗುಣಿ ಹರಿಕಂತ್ರವಾಡದಿಂದ ಬಿಳಿಹೊಯಂಗಿ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಬೇಕಿತ್ತು. ಅದು ನನ್ನ ಅವಧಿಯಲ್ಲಿ ಸಾಧ್ಯವಾಗಲಿಲ್ಲ. ಮುಂದಿನ ಅಧಿಕಾರಿಯು ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಎಂಬ ನಂಬಿಕೆ ನನಗಿದೆ,” ಎಂದು ಹೃದಯದಿಂದ ಹೇಳಿದರು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷರಾದ ವೆಂಕಟರಮಣ ನಾಯ್ಕ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಾದೇವ್ ಗುನಗ, ಸೇರಿದಂತೆ ಗ್ರಾಮ್ ಪಂಚಾಯತ್ ಸದಸ್ಯರಾದ.ಮಂಜುನಾಥ್ ಆರ್ ನಾಯ್ಕ, ನಾಗರಾಜ್ ಭಟ್ಟರು, ಬೇಬಿ ತಾಂಡೇಲಾ, ಪಂಚಾಯಿತಿಯ ಅಧಿಕಾರಿವರ್ಗ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಕಿರಣ ಗಾಂವಕರ

