ಅಂಕೋಲಾದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಹಾಗೂ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಈಗ ಗಂಭೀರ ಪ್ರಶ್ನೆಗಳು ಎದ್ದಿವೆ. ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಐ.ಆರ್.ಬಿ ಕಂಪನಿಯು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಬಿಟ್ಟುಹೋಗಿರುವ ಅಪಾಯಕಾರಿ ಕುರುಹುಗಳು ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿವೆ.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಾಮಗಾರಿಯ ಪಕ್ಕದಲ್ಲೇ ಸಾರ್ವಜನಿಕರ ಜೀವಕ್ಕೆ ಕಂಟಕವಾಗುವಂತಹ ಗಂಭೀರ ಲೋಪವೊಂದು ಕಣ್ಣಿಗೆ ಬೀಳುತ್ತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾದಾನ ವ್ಯಕ್ತವಾಗುತ್ತಿದೆ.

ಹೆದ್ದಾರಿ ಬದಿಯ ಈ ಕಸದ ನಿರ್ವಹಣೆ ಪುರಸಭೆಯ ವ್ಯಾಪ್ತಿಗೆ ಬರುವುದಿಲ್ಲವೇ?
ಸರ್ವೀಸ್ ರಸ್ತೆಯ ಅಂಚಿನಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ಚರಂಡಿಗೆ ಅಲ್ಲಲ್ಲಿ ಸುರಕ್ಷತಾ ಮುಚ್ಚಳ ಅಳವಡಿಸದೆ ಕಾಮಗಾರಿಯನ್ನು ಹಾಗೆಯೇ ಬಿಡಲಾಗಿದೆ. ಇದರ ನೇರ ಪರಿಣಾಮವಾಗಿ, ಈ ಜಾಗವು ಇದೀಗ ಪ್ಲಾಸ್ಟಿಕ್ ಹಾಗೂ ಇತರ ಘನತ್ಯಾಜ್ಯಗಳ ಸಂಗ್ರಹಣಾ ಕೇಂದ್ರವಾಗಿ ಮಾರ್ಪಟ್ಟಿದೆ. ಕಸದಿಂದ ಸಂಪೂರ್ಣವಾಗಿ ಬ್ಲಾಕ್ ಆಗಿರುವ ಈ ಚರಂಡಿಯಲ್ಲಿ, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವುದು ಕಷ್ಟವಾದಂತಾಗಿದೆ.
ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಕಾಮಗಾರಿ ಐ.ಆರ್.ಬಿ ಕಂಪನಿಗೆ ಸೇರಿದ್ದರೂ, ನಗರದ ವ್ಯಾಪ್ತಿಯಲ್ಲಿರುವ ಈ ರಸ್ತೆ ಬದಿಯ ಕಸ ವಿಲೇವಾರಿ ಮತ್ತು ಸ್ವಚ್ಛತೆ ಸ್ಥಳೀಯ ಪುರಸಭೆಗೆ ಸಂಬಂಧಿಸಿದ್ದಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇಲ್ಲಿ ಕೊಳೆತು ನಾರುತ್ತಿರುವ ಕಸದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿದ್ದರೂ, ಈ ಜಾಗ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೋ ಎಂಬಂತೆ ಸ್ಥಳೀಯ ಆಡಳಿತ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೇವಲ ಕಸದ ಸಮಸ್ಯೆ ಮಾತ್ರವಲ್ಲದೆ, ಇದೇ ರಸ್ತೆ ಬದಿಯ ಮಣ್ಣಿನಲ್ಲಿ ಮೇಲಕ್ಕೆ ಎದ್ದು ಕೊಂಡಿರುವ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ನೇರವಾಗಿ ಅನಾಹುತವನ್ನು ಆಹ್ವಾನಿಸುತ್ತಿವೆ. ಡಾಂಬರು ರಸ್ತೆಯ ಅಂಚು ಕೂಡ ಮಣ್ಣಿನೊಂದಿಗೆ ಸಮತಟ್ಟಾಗಿಲ್ಲದೆ ಗುಂಡಿಯಂತಾಗಿದೆ. ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ರಸ್ತೆ ಬದಿಗೆ ಇಳಿದರೆ, ನಿಯಂತ್ರಣ ಕಳೆದುಕೊಂಡು ನೇರವಾಗಿ ಈ ಕಬ್ಬಿಣದ ಸರಳುಗಳ ಮೇಲೆ ಅಥವಾ ಕಸದ ಗುಂಡಿಗೆ ಬೀಳುವುದು ಬಹುತೇಕ ಖಚಿತ. ರಾತ್ರಿ ವೇಳೆಯಲ್ಲಿ ಈ ಅಪಾಯಕಾರಿ ಸರಳುಗಳು ಗೋಚರಿಸದಿರುವುದರಿಂದ, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಕಂಪನಿಯ ಈ ಸುರಕ್ಷತಾ ಲೋಪವು ಯಾವುದೇ ಕ್ಷಣದಲ್ಲಾದರೂ ದೊಡ್ಡ ದುರಂತಕ್ಕೆ ಕಾರಣವಾಗುವ ಸ್ಪಷ್ಟ ಸಾಧ್ಯತೆಗಳಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಕಾಮಗಾರಿ ಸಾಮಗ್ರಿಗಳನ್ನು ಹೀಗೆ ಅಪಾಯಕಾರಿಯಾಗಿ ಬಿಟ್ಟುಹೋಗಿರುವುದು ಕಾನೂನಾತ್ಮಕ ವಾಗಿಯೂ ಗಂಭೀರ ಲೋಪವಾಗಿದೆ. ಯಾವುದೇ ಅಮಾಯಕ ಜೀವಕ್ಕೆ ಹಾನಿಯಾಗುವ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್.ಬಿ. ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ಅಪಾಯಕಾರಿ ಸರಳುಗಳನ್ನು ತೆರವುಗೊಳಿಸಿ, ಅಂಚನ್ನು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಸರಿಪಡಿಸಬೇಕು.
ಹಾಗೆಯೇ, ಚರಂಡಿಯ ಸ್ವಚ್ಛತೆಯ ತನ್ನ ಜವಾಬ್ದಾರಿಯನ್ನು ಸ್ಪಷ್ಟಪಡಿಸಿ, ಕಡ್ಡಾಯವಾಗಿ ಮುಚ್ಚಳ ಅಳವಡಿಸುವ ಮೂಲಕ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಸುಪ್ರಿಯಾ ವಿಷ್ಣು ನಾಯ್ಕ

