ಅಂಕೋಲಾ, ಅ. 8: ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಹೋಗಿದ್ದ ಯಲ್ಲಾಪುರದ ಯುವಕನೋರ್ವ ಇಲ್ಲಿನ ಬೆಡ್ತಿ ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಯಲ್ಲಾಪುರ ತಾಲೂಕಿನ ಸಬಗೇರಿ ನಿವಾಸಿ ಸಾಗರ ರಾಮ ದೇವಾಡಿಗ (22) ನಾಪತ್ತೆಯಾದ ಯುವಕ. ಈತನು ದಿನಾಂಕ 07-10-2025 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಅಂಕೋಲಾ ತಾಲೂಕಿನ ಕೈಗಡಿ ಸಮೀಪದ ಬೆಡ್ತಿ ಹೊಳೆಯ ದಡದಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದನು.

ಈ ಸಂದರ್ಭದಲ್ಲಿ ಹೊಳೆಯ ನೀರಿಗಿಳಿದ ಸಾಗರ, ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಕಾಣೆಯಾಗಿದ್ದಾನೆ ಎಂದು ಹೇಳಲಾಗಿದೆ.ಘಟನೆ ಕುರಿತು ನಾಪತ್ತೆಯಾದ ಯುವಕನ ಮಾವ ಶ್ರೀ ರವಿ ಗೋವಿಂದ ದೇವಾಡಿಗ ಅವರು ಬುಧವಾರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಪೊಲೀಸರು ಮನುಷ್ಯ ಕಾಣೆಯಾದ ಪ್ರಕರಣವನ್ನು (ಗುನ್ನಾ ನಂ: 181/2025) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕರಲ್ಲಿ ಮನವಿ:ನಾಪತ್ತೆಯಾದ ಸಾಗರ ಸುಮಾರು 5.6 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಟೀ-ಶರ್ಟ್ ಧರಿಸಿದ್ದನು. ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ, ತಕ್ಷಣ ಅಂಕೋಲಾ ಪೊಲೀಸ್ ಠಾಣೆಗೆ (ದೂರವಾಣಿ: (08388) 220333 ಅಥವಾ ಮೊಬೈಲ್: 9480805250) ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

