ಹೊನ್ನಾವರದಲ್ಲಿ ಸೆರೆಯಾದ ಚಂದ್ರಗ್ರಹಣದ ಅದ್ಭುತ ಕ್ಷಣಗಳು

News Desk
1 Min Read

ಹೊನ್ನಾವರ, ಉತ್ತರ ಕನ್ನಡ – ಸೆಪ್ಟೆಂಬರ್ 7 ಮತ್ತು 8, 2025ರಂದು ನಡೆದ ಸಂಪೂರ್ಣ ಚಂದ್ರಗ್ರಹಣದ ಅಪರೂಪದ ಕ್ಷಣಗಳನ್ನು ಸ್ಥಳೀಯ ಸಂಶೋಧಕರು ಸೆರೆ ಹಿಡಿದು ವಿಶೇಷತೆ ಮೂಡಿಸಿದ್ದಾರೆ.

ಜೀವವಾಸ್ತವ ಸಂಶೋಧಕ ರವಿ ಹೆಗಡೆ ಹಾಗೂ ಡಾ. ಲಕ್ಷ್ಮಿ ಸೌಜನ್ಯ ಬಮ್ಮಿಡಿ ಅವರು ಫ್ರಾನ್‌ಹೋಫರ್ ಟೆಲಿಸ್ಕೋಪ್ ಬಳಸಿ ಹೊನ್ನಾವರದಲ್ಲಿ ಈ ಗ್ರಹಣದ ವಿವಿಧ ಹಂತಗಳನ್ನು ಫೋಟೋಗಳಲ್ಲಿ ದಾಖಲಿಸಿದ್ದಾರೆ.

ಗ್ರಹಣದ ಆರಂಭದಿಂದ ಹಿಡಿದು ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿಗೆ ಪ್ರವೇಶಿಸಿ ಕೆಂಪು ಛಾಯೆಯನ್ನು ಪಡೆದುಕೊಂಡ ಕ್ಷಣಗಳವರೆಗೆ ನಡೆದ ಈ ಅಪರೂಪದ ಘಟನೆಯ ಚಿತ್ರಗಳು ವಿಜ್ಞಾನ ಆಸಕ್ತರಿಗೂ, ಸಾಮಾನ್ಯ ಜನರಿಗೂ ದೊಡ್ಡ ಆಕರ್ಷಣೆಯಾಗಿವೆ.

ರವಿ ಹೆಗಡೆ ಅವರು ಕಳಿಸಿದ ಫೋಟೋಗಳು ಚಂದ್ರನ ಮೇಲ್ಮೈಯಲ್ಲಿ ನೆರಳು ಹೇಗೆ ಹರಡುತ್ತಾ ಮತ್ತೆ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದನ್ನು ವೀಕ್ಷಿಸಲು ಸ್ಥಳೀಯರು ಹಾಗೂ ವಿಜ್ಞಾನಾಸಕ್ತರು ರಾತ್ರಿ ವೇಳೆ ಸೇರಿದ್ದು ವಿಶೇಷವಾಗಿತ್ತು.

ಈ ಅಧ್ಯಯನದ ಕುರಿತು ರವಿ ಹೆಗಡೆ ಅವರು, “ಹೊನ್ನಾವರದಲ್ಲಿ ಈ ಗ್ರಹಣವನ್ನು ವಿಜ್ಞಾನದ ಸಾಧನದ ಮೂಲಕ ದಾಖಲಿಸಲು ನಮಗೆ ಅವಕಾಶ ದೊರೆತಿದೆ. ಇದನ್ನು ಎಲ್ಲರಿಗೂ ಪರಿಚಯಿಸಬೇಕು ಎಂಬ ಉದ್ದೇಶದಿಂದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.

ಈ ಅದ್ಭುತ ಕ್ಷಣಗಳನ್ನು ವೀಕ್ಷಿಸಲು ಹಾಗೂ ಗ್ರಹಣದ ವೈಜ್ಞಾನಿಕ ಅಂಶಗಳನ್ನು ಅರಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಪಸ್ಥಿತರಾಗಿದ್ದರು..

Share This Article