
ಅಂಕೋಲಾ, (ಮೇ 8 2025): ಅಂಕೋಲಾ ತಾಲೂಕಿನ ಅವರ್ಸ ಗ್ರಾಮ ಪಂಚಾಯತ ವ್ಯಾಪ್ತಿಯ 23 ವ್ಯಾಪಾರ ಮಳಿಗೆಗಳ ಪೈಕಿ 16 ವ್ಯಾಪಾರ ಮಳಿಗೆಗಳಿಂದ ಬರೋಬ್ಬರಿ 9,15,620 ರೂಪಾಯಿ ಬಾಕಿ ಉಳಿದಿರುವ ಘಟನೆ ಸಂಬಂಧಿಸಿದ ದಾಖಲೆಗಳೊಂದಿಗೆ ಬೆಳಕಿಗೆ ಬಂದಿದ್ದು, ಗ್ರಾಮ ಪಂಚಾಯತಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಪರೋಕ್ಷವಾಗಿ ಬಹಿರಂಗವಾಗಿದೆ.
ಗ್ರಾಮ ಪಂಚಾಯತಿ ಈ ಮಳಿಗೆಗಳನ್ನು ಟೆಂಡರ್ ಮೂಲಕ ಹರಾಜು ಮಾಡಿದರೂ ಕೇವಲ ಏಳು ಮಾಲೀಕರು ಮಾತ್ರ ಸರಿಯಾಗಿ ಬಾಡಿಗೆ ಪಾವತಿಸುತ್ತಿರುವುದು ಸ್ಪಷ್ಟವಾಗಿದೆ. ಉಳಿದ 16 ಮಳಿಗೆ ಮಾಲೀಕರು ತಿಂಗಳಾದರೂ ಬಾಕಿ ಬಾಡಿಗೆ ಪಾವತಿಸದೇ ಬಂದಿರುವ ಮಾಹಿತಿ RTI ಮೂಲಕ ತಿಳಿದು ಬಂದಿದೆ.
ಸಾಮಾಜಿಕ ಹೋರಾಟಗಾರ ಹೊನ್ನಪ್ಪ ವಿಠೋಬ ನಾಯಕ ಪತ್ರಿಕಾ ಪ್ರಕಟಣೆ ಮೂಲಕ ಕಿಡಿಕಾರಿದ್ದು, ಕಳೆದ 25–30 ವರ್ಷಗಳಿಂದ ಹಲವು ನಿಕಟ ಪೂರ್ವ ಮತ್ತು ಹಾಲಿ ಅಭಿವೃದ್ಧಿ ಅಧಿಕಾರಿ ಹಾಗೂ ಹಾಲಿ ಕೆಲವು ಸದಸ್ಯರು ಈ ಮಳಿಗೆ ಆಸ್ತಿಗಳನ್ನು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಸರ್ಕಾರದಿಂದ ಅನುದಾನಗಳು ಬಂದರೂ ಸಾರ್ವಜನಿಕರಿಗೆ ವಿವರ ನೀಡದೇ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಕ್ರಮ ಮಳಿಗೆ ಬಳಕೆ – ಕುಟುಂಬವೊಂದರ ಆಧಿಪತ್ಯ:
ಪಂಚಾಯತಿ ವ್ಯಾಪ್ತಿಯ ಮೂರೂ ಮಳಿಗೆಗಳು ಮೂರು ದಶಕಗಳಷ್ಟು ಕಾಲ ಮರು ಟೆಂಡರ್ ಮಾಡದೇ ಬಳಸಲ್ಪಡುತ್ತಿವೆ. ಮಾಜಿ ಅಧ್ಯಕ್ಷ ಮಾರುತಿ ಬಾಬುರಾಯ್ ನಾಯ್ಕ ತಮ್ಮ ಅಣ್ಣ ಮಂಜುನಾಥ ನಾಯ್ಕ ಅವರಿಗೆ ಮಳಿಗೆ ನೀಡಿದ್ದು, ಅವರ ತಮ್ಮ ಶ್ರೀಧರ ನಾಯ್ಕ ಬಾಡಿಗೆ ಪಾವತಿಸದೇ ಫಾಸ್ಟ್ ಫುಡ್ ಅಂಗಡಿಯನ್ನು ಪಂಚಾಯತಿ ವ್ಯಾಪ್ತಿಯಲ್ಲಿ ಅತಿಕ್ರಮಣ ಮಾಡಿ ನಡೆಸುತ್ತಿದ್ದಾರೆ ಎಂಬುದು ದಾಖಲೆಗಳಿಂದ ಬಯಲಾಗಿದ್ದು, ಈ ದುರ್ಬಳಕೆ ಕಾನೂನಿಗೆ ವಿರುದ್ಧವಾಗಿದೆ. ಎಂದು ಹೊನ್ನಪ್ಪ ನಾಯಕ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ಕಿಡಿಕಾರಿದ್ದಾರೆ.
ಕಾನೂನು ಉಲ್ಲಂಘನೆಗಳು :
IPC ಸೆಕ್ಷನ್ 409: ಸರ್ಕಾರಿ ಆಸ್ತಿ ದುರ್ಬಳಕೆ ಹಾಗೂ ಸಾರ್ವಜನಿಕ ನಂಬಿಕೆಗೆ ಧಕ್ಕೆ.
ಗ್ರಾಮ ಪಂಚಾಯತಿ ಕಾಯ್ದೆಯ ಉಲ್ಲಂಘನೆ : ಬಾಡಿಗೆ ವಸೂಲಿಯಲ್ಲಿ ವಿಫಲತೆ ಹಾಗೂ ನಿಯಮ ಮೀರಿ ಮಳಿಗೆ ಹಂಚಿಕೆ.

ಸಾರ್ವಜನಿಕ ಒತ್ತಾಯಗಳು:
1. ಬಾಕಿ ಬಾಡಿಗೆ ತಕ್ಷಣ ವಸೂಲಿ ಮಾಡಬೇಕು.
2. ಅಕ್ರಮವಾಗಿ ಮಳಿಗೆ ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
3. ನಿರ್ಲಕ್ಷ್ಯ ತೋರಿದ ಹಾಲಿ ಹಾಗೂ ಮಾಜಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು.
4. ಟೆಂಡರ್ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಪಾರದರ್ಶಕತೆ ಸಾಧಿಸಬೇಕು.
5. ಲೋಕಾಯುಕ್ತ ಅಥವಾ ಜಿಲ್ಲಾಧಿಕಾರಿ ಮಟ್ಟದಲ್ಲಿ ವಿಸ್ತೃತ ತನಿಖೆ ಆರಂಭಿಸಬೇಕು.
ಈ ಬೆಳವಣಿಗೆ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ನಿಲ್ಲಬೇಕು. ಸಾರ್ವಜನಿಕ ಆಸ್ತಿಯ ದುರ್ಬಳಕೆಗೆ ಲಿಪ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಕೇವಲ ಕಾನೂನು ಕರ್ತವ್ಯವಷ್ಟೆ ಅಲ್ಲ, ಜನತೆಗೆ ಉತ್ತರದಾಯಿತ್ವ ಹೊಂದಿರುವ ಪಾರದರ್ಶಕ ಆಡಳಿತದ ಪ್ರತಿಫಲವೂ ಆಗಬೇಕು. ಎಂಬುದು ಹೊನ್ನಪ್ಪ ನಾಯಕರ ಆಶಯವಾಗಿದೆ.

