ಅಂಕೋಲಾ: ಇಲ್ಲಿನ ಮಂಜುಗುಣಿ ಸೇತುವೆ ಬಳಿ ಡಿಸೆಂಬರ್ 31 ರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಲೂಕಿನ ಅಲಗೇರಿ ಗ್ರಾಮದ ಯುವಕ ಪ್ರೀತೇಶ್ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು ರಾತ್ರಿ ಜಾವ ಮಂಜುಗುಣಿ ಸೇತುವೆ ಬಳಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಪ್ರೀತೇಶ್ ಅವರ ತಲೆ ಮತ್ತು ದೇಹಕ್ಕೆ ಗಂಭೀರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಬದುಕುಳಿಸುವ ವೈದ್ಯರ ಪ್ರಯತ್ನ ವಿಫಲವಾಗಿದ್ದು, ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಗ್ರಾಮಸ್ಥರ ಶೋಕ: ಮೃತ ಪ್ರೀತೇಶ್ ನಾಯ್ಕ ಅವರು ಅಲಗೇರಿ ಗ್ರಾಮದಲ್ಲಿ ತಮ್ಮ ಸಮಾಜಮುಖಿ ಕಳಕಳಿ ಮತ್ತು ಸ್ನೇಹಪರ ವ್ಯಕ್ತಿತ್ವದ ಮೂಲಕ ಅಲ್ಪಕಾಲದಲ್ಲೇ ಉತ್ತಮ ಹೆಸರು ಗಳಿಸಿದ್ದರು. ಊರಿನ ಯಾವುದೇ ಕೆಲಸವಿದ್ದರೂ ಲವಲವಿಕೆಯಿಂದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಆಶಾಕಿರಣವೊಂದು ಇಂದು ಮರೆಯಾದಂತಾಗಿದೆ. ಪ್ರೀತೇಶ್ ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಲಗೇರಿ ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

