ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 10ರಲ್ಲಿ ಚರಂಡಿ ಇಲ್ಲದೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಪುರಸಭೆ ಮುಂದಾದ ಹಿನ್ನೆಲೆಯಲ್ಲಿ, ಹೊನ್ನೇಕೇರಿ ಗ್ರಾಮದ ಸರ್ವೇ ನಂ.61ರ ಅನೇಕ ಹಿಸ್ಸಾಗಳಲ್ಲಿ ನಿನ್ನೆ ಪ್ರಾರಂಭವಾದ ಕಾಮಗಾರಿ ಇಂದು ಹೊಸ ತಿರುವು ಪಡೆದಿದೆ.
ದಿನಾಂಕ 07-12-2025ರಂದು ಸ್ಥಳೀಯರು ಸುಭಾಷ್ ನಾಯ್ಕನ ಹೋರಾಟಕ್ಕೆ ಸ್ಪಷ್ಟವಾಗಿ ಕೈಜೋಡಿಸಿ, ಮೊದಲು ಚರಂಡಿ ನಿರ್ಮಾಣ ಮಾಡುವುದು ಸಾರ್ವಜನಿಕರ ಪ್ರಮುಖ ಹಿತಾಸಕ್ತಿ ಬೇಡಿಕೆ ಎಂದು ಗಟ್ಟಿಯಾಗಿ ಆಗ್ರಹಿಸಿದ್ದಾರೆ. ದಿನಾಂಕ 06-12-2025ರಂದು ಪುರಸಭೆಯ ಆದೇಶದ ಮೇರೆಗೆ ಗುತ್ತಿಗೆದಾರರು ಜೆಸಿಬಿ ಮೂಲಕ ಮಣ್ಣನ್ನು ಸಮತಟ್ಟುಗೊಳಿಸಿ ಡ್ರೈನೇಜ್ ಇಲ್ಲದೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಾರಂಭಿಸಿದುದು ಈಗ ತೀವ್ರವಾದ ವಿವಾದಕ್ಕೆ ಕಾರಣವಾಗಿದೆ.
ಕಳೆದ ಹತ್ತು ವರ್ಷಗಳಿಂದ ಇದೇ ಪ್ರದೇಶದಲ್ಲಿ ನೈಸರ್ಗಿಕ ಮಳೆನೀರು ‘ಕೇಣಿ ಹಳ್ಳ’ಕ್ಕೆ ಹರಿಯುವ ಮಾರ್ಗ ಬಂದ್ ಆಗಿರುವ ಪರಿಣಾಮ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, OS No.85/2015 ಅಡಿಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಚರಂಡಿ ಪುನಃಸ್ಥಾಪನೆ ಮಾಡದೇ ರಸ್ತೆ ಕಾಮಗಾರಿ ಕೈಗೊಳ್ಳುವುದು ಜನರ ಅಸಮಾಧಾನದ ಮೂಲ ಕಾರಣವಾಗಿದೆ.
ಇಂದು ಬೆಳಿಗ್ಗೆ ರಸ್ತೆ ಕಾಮಗಾರಿ ನಿಂತಿದ್ದ ವೇಳೆ ಸ್ಥಳೀಯರು ಗುಂಪುಗೂಡಿ, “ಮೊದಲು ಚರಂಡಿ ಅಗತ್ಯ. ಮಳೆಗಾಲದಲ್ಲಿ ಮನೆಗಳು ಮುಳುಗುತ್ತವೆ, ಮಕ್ಕಳಿಗೆ ಅಂಗನವಾಡಿಗೆ ಹೋಗಲು ಸಾದ್ಯವಾಗುವುದಿಲ್ಲ; ಚರಂಡಿ ಇಲ್ಲದೆ ರಸ್ತೆ ಮಾಡಿದರೆ ದುರಂತ ಅನಿವಾರ್ಯ” ಎಂದು ಕಿಡಿಕಾರಿದರು. ಸಾರ್ವಜನಿಕರು ಏಕಕಂಠವಾಗಿ—“ಯಾವುದೇ ಕಾರಣಕ್ಕೂ ಮೊದಲು ಚರಂಡಿ, ನಂತರ ರಸ್ತೆ”—ಎಂಬ ನಿಲುವು ವ್ಯಕ್ತಪಡಿಸಿದರು.

ಈ ಸಂದರ್ಭ ಪುರಸಭೆಯ ವಿರುದ್ಧ ಘೋಷಣೆಗಳೂ ಮೊಳಗಿದವು. ರವಿವಾರವಾದ ಕಾರಣ ಇಂದು ಕಾರ್ಯ ತಾತ್ಕಾಲಿಕವಾಗಿ ನಿಂತಿದ್ದರೂ, ನಾಳೆ ಗುತ್ತಿಗೆದಾರರು ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮುಂದುವರಿಸಿದರೆ ಪರಿಸ್ಥಿತಿ ಬಿಗಡಾಯಿಸುವ ಸಂಭವವಿದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಯಾವುದೇ ಅನಾಹುತಕ್ಕೆ ಕಾರಣವಾಗದಂತೆ ಮತ್ತು ಕಾನೂನು ಉಲ್ಲಂಘನೆ ಆಗದಂತೆ, ಪುರಸಭೆ ಮೊದಲು ಸಮರ್ಪಕ ಡ್ರೈನೇಜ್ ವ್ಯವಸ್ಥೆ ಕಲ್ಪಿಸಿ ನಂತರ ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂಬುದು ಸ್ಥಳೀಯರ ಬಲವಾದ ಆಗ್ರಹವಾಗಿದೆ.
ಇದಕ್ಕೂ ಮುನ್ನ, ಸುಭಾಷ್ ನಾಯ್ಕ ಅವರು ನಿನ್ನೆ ದಿನಾಂಕ 06-12-2025ರಂದು ತಮ್ಮ ಪರ ವಕೀಲರ ಮೂಲಕ ಪುರಸಭೆ ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ನಾಳೆ ಪುರಸಭೆಗೆ ತಲುಪುವ ಸಾಧ್ಯತೆ ಇದೆ. ನೋಟಿಸ್‌ನಲ್ಲಿ—ವಿಚಾರಣೆಯಲ್ಲಿರುವ ಜಾಗದಲ್ಲಿ ಚರಂಡಿ ಮಾಡದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಲಾಗಿದೆ. ಈಗ ಪುರಸಭೆಯ ಮುಂದಿರುವ ದೊಡ್ಡ ಪ್ರಶ್ನೆ ಏನೆಂದರೆ—ಅಧಿಕಾರಿಗಳು ಕಾನೂನುಬದ್ಧ ಪ್ರಕ್ರಿಯೆಯನ್ನು ಪಾಲಿಸಿ ಮೊದಲು ಚರಂಡಿ ವ್ಯವಸ್ಥೆ ಕೈಗೊಳ್ಳುವರಾ, ಅಥವಾ ವಿವಾದಾತ್ಮಕ ಕಾಮಗಾರಿಯನ್ನು ಮುಂದುವರಿಸುವರಾ ಎಂಬುದಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರಾದ ರೋಹಿಣಿ ರಾಮ್ ನಾಯ್ಕ, ಪ್ರಿಯಾ ನಾಯ್ಕ, ರೋಹಿಣಿ ಗಂಗಾಧರ್ ನಾಯ್ಕ, ಸುಗಂಧ ನಾಯ್ಕ, ವೀಣಾ ಮಹೇಶ್ ನಾಯ್ಕ, ಶ್ರುತಿ ರಾಜೀವ್ ನಾಯ್ಕ, ಯಾದಿ ರಾಜು ನಾಯ್ಕ, ನರಸಿಂಹ ರಾಮ ಆಗೇರ್, ದೀಪಕ ತಾರಾನಾಥ ನಾಯ್ಕ, ಸುಭಾಷ್ ಗಂಗಾಧರ್ ನಾಯ್ಕ, ಸಂಜಯ ರಾಕು ನಾಯ್ಕ, ಅಜಯ ಅರುಣ ನಾಯ್ಕ, ತೋರಣಕುಮಾರ ಮಂಗೇಶ ನಾಯ್ಕ, ಗೌರೀಶ ಸುರೇಶ್ ನಾಯ್ಕ, ನಂದೀಶ ದೇವಿದಾಸ ನಾಯ್ಕ ಮತ್ತು ನಂದು ಕೃಷ್ಣ ನಾಯ್ಕ ಸೇರಿದಂತೆ ಹಲವು ನಿವಾಸಿಗಳು “ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮಾಡಿದರೆ ನಮ್ಮ ಮನೆಗಳಿಗೆ ನೀರು ನುಗ್ಗುವುದು ಖಚಿತ, ಸಾರ್ವಜನಿಕರ ಬೇಡಿಕೆಯನ್ನು ಕಡೆಗಣಿಸುವ ಅಭಿವೃದ್ಧಿ ಯಾರಿಗೂ ಒಳ್ಳೆಯದು ಅಲ್ಲ” ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಾರ್ವಜನಿಕರ ದೃಷ್ಟಿಯಲ್ಲಿ, ಚರಂಡಿ ವ್ಯವಸ್ಥೆಯು ನಿರ್ಮಾಣವಾಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಉದ್ವಿಗ್ನತೆ ಎದುರಾಗುವ ಸಾಧ್ಯತೆ ಇದೆ.
ವರದಿ: ಕಿರಣ ಗಾಂವಕರ

