ಕೇಣಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ–ಸ್ಫೋಟ ; ಇಬ್ಬರು ಮಕ್ಕಳು ಸೇರಿ ಆರು ಮಂದಿಗೆ ಗಂಭೀರ ಗಾಯ..

News Desk
2 Min Read

ಅಂಕೋಲಾ : ತಾಲೂಕಿನ ಕೇಣಿ ಗ್ರಾಮದಲ್ಲಿ ಅಡುಗೆ ಅನಿಲ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿದ್ದು, ಅದರಿಂದ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ.ಕೇಣಿಯ ಗೌರೀಶ ನಾಯಕ ಅವರ ಮನೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹೊನ್ನಿಕೇರಿ ಮೂಲದ ಸುದರ್ಶನ ಲೋಕಪ್ಪ ನಾಯ್ಕ (48) ಅವರ ನಿವಾಸದಲ್ಲಿ ಈ ಅವಘಡ ಸಂಭವಿಸಿದೆ.

ಮನೆ ಒಳಗೆ ಅಡುಗೆ ಅನಿಲದ ತೀವ್ರ ವಾಸನೆ ಹರಡಿದ್ದರಿಂದ, ಸಿಲಿಂಡರ್ ಪರಿಶೀಲನೆಗಾಗಿ ಸ್ಥಳೀಯ ನಿವಾಸಿ ಶ್ರವಣ್ ಅವರನ್ನು ಕರೆಸಲಾಗಿತ್ತು ಎನ್ನಲಾಗಿದೆ. ಶ್ರವಣ್ ಅವರು ಸಿಲಿಂಡರ್ ಪರಿಶೀಲನೆ ನಡೆಸುತ್ತಿದ್ದ ವೇಳೆ, ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮನೆ ಒಳಗೆ ಸಂಗ್ರಹವಾಗಿದ್ದ ಅನಿಲ ತಕ್ಷಣವೇ ಸ್ಫೋಟಗೊಂಡಿದೆ. ಪರಿಣಾಮವಾಗಿ ಮನೆಯೊಳಗೆ ಭಾರೀ ಅಗ್ನಿ ಆರ್ಭಟ ಉಂಟಾಗಿ, ಹಲವರು ಗಾಯಗೊಂಡಿದ್ದಾರೆ.

ಈ ದುರ್ಘಟನೆಯಲ್ಲಿ ಸುದರ್ಶನ ನಾಯ್ಕ ಅವರ ಪತ್ನಿ, 10 ವರ್ಷದ ಪುತ್ರ, ಗ್ಯಾಸ್ ಪರಿಶೀಲನೆಗೆ ಬಂದಿದ್ದ ಶ್ರವಣ್, ಮನೆಯ ಮಾಲೀಕ ಗೌರೀಶ ನಾಯಕ ಅವರ ಪತ್ನಿ ಹಾಗೂ 5 ವರ್ಷದ ಮೊಮ್ಮಗ ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ, ಕುಮಟಾ ಹಾಗೂ ಮಣಿಪಾಲದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಡಿವೈಎಸ್ಪಿ, ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ ಹಾಗೂ ಅಂಕೋಲಾದ ಗ್ರಾಮ ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗ್ಯಾಸ್ ಲೀಕೆಜ್ ಸಮಯದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

ಗ್ಯಾಸ್ ಸೋರಿಕೆಯಂತಹ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗ್ಯಾಸ್ ವಾಸನೆ ಬಂದ ತಕ್ಷಣ ಸಿಲಿಂಡರ್ ವಾಲ್ವ್ ಅನ್ನು ಮುಚ್ಚಬೇಕು.

ಮನೆ ಒಳಗೆ ಯಾವುದೇ ಎಲೆಕ್ಟ್ರಿಕ್ ಸ್ವಿಚ್, ಮೊಬೈಲ್, ಟಾರ್ಚ್, ಫ್ಯಾನ್ ಬಳಸಬಾರದು.

ಮ್ಯಾಚ್ ಸ್ಟಿಕ್ ಅಥವಾ ಲೈಟರ್ ಬಳಸುವುದು ಸಂಪೂರ್ಣ ನಿಷೇಧತಕ್ಷಣ ಬಾಗಿಲು–ಕಿಟಕಿಗಳನ್ನು ತೆರೆಯಿಸಿ ಗಾಳಿ ಹರಿಯಲು ಅವಕಾಶ ನೀಡಬೇಕು.

ಗ್ಯಾಸ್ ಲೀಕೆಜ್ ಪರಿಶೀಲನೆಗಾಗಿ ತರಬೇತಿ ಇಲ್ಲದವರನ್ನು ಕರೆಯಿಸಬಾರದು.

ಮನೆಯ ಹೊರಗೆ ತೆರಳಿ, ಸುರಕ್ಷಿತ ಸ್ಥಳದಿಂದ ಗ್ಯಾಸ್ ಏಜೆನ್ಸಿ ಅಥವಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕುಸ್ವಲ್ಪ ನಿರ್ಲಕ್ಷ್ಯವೂ ಭಾರೀ ಅನಾಹುತಕ್ಕೆ ಕಾರಣವಾಗಬಹುದರಿಂದ, ಗ್ಯಾಸ್ ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯವೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Share This Article