ಅಂಕೋಲಾ, ಅ.2: ಕೇಣಿಯಲ್ಲಿ ನಿರ್ಮಾಣಗೊಳ್ಳಲು ಉದ್ದೇಶಿಸಿರುವ ವಾಣಿಜ್ಯ ಬಂದರು ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ಮೀನುಗಾರರ ನೇತೃತ್ವದ ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿ ಕಳೆದ 10 ತಿಂಗಳುಗಳಿಂದ ಮನವಿ, ಪ್ರತಿಭಟನೆ, ಸಾರ್ವಜನಿಕ ಆಲಿಕೆ ಸಭೆಗಳಲ್ಲಿ ಧ್ವನಿಯೆತ್ತುವ ಮೂಲಕ ತನ್ನ ಗಟ್ಟಿಯಾದ ನಿಲುವನ್ನು ತೋರಿಸಿದೆ.
ಹೋರಾಟಗಾರರ ಅಭಿಪ್ರಾಯದಂತೆ, ಬಂದರು ಸ್ಥಾಪನೆಯಿಂದ ಅಂಕೋಲಾ, ಗೋಕರ್ಣ, ಕಾರವಾರ ಸೇರಿದಂತೆ ಸುಮಾರು 103 ಹಳ್ಳಿಗಳು ಪರಿಸರ ಹಾಗೂ ಜೀವನೋಪಾಯದ ಹಾನಿಗೆ ಗುರಿಯಾಗಲಿವೆ. ಈಗಾಗಲೇ ಬೊಗ್ರಿಬೈಲ್, ಕೃಷ್ಣಾಪುರ, ಬಾಳೆಗುಳಿ, ಅಗೇರ ಕಾಲೋನಿ, ಶಿರಕುಳಿ, ತಳಗದ್ದೆ, ಅಂಬಾರ ಕೊಡ್ಲ, ಕಂತ್ರಿ ಮುಂತಾದ ಹಳ್ಳಿಗಳ ಜನರು – ರೈತರು, ಕೂಲಿ ಕಾರ್ಮಿಕರು ಹಾಗೂ ಪ್ರಜ್ಞಾವಂತ ನಾಗರಿಕರು – ಹೋರಾಟಕ್ಕೆ ಕೈಜೋಡಿಸಿ, “ರಸ್ತೆ, ರೈಲು ಮಾರ್ಗ ಅಥವಾ ಉಗ್ರಾಣಕ್ಕಾಗಿ ನಮ್ಮ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಗಾಂಧಿ ಜಯಂತಿಯಂದು ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮುಂದಿನ ಹೋರಾಟಕ್ಕೆ ಸಂಕೇತಾತ್ಮಕ ಚಾಲನೆ ನೀಡಲಾಯಿತು. ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಸ್ವರ್ಣ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿ.ಎನ್. ನಾಯಕ ಮಾತನಾಡಿ, “ಬ್ರಿಟಿಷರು ಜನರನ್ನು ಒಡೆದು ಆಳಿದಂತೆ ಇಂದಿನ ಸರ್ಕಾರಗಳು ಬಂಡವಾಳಶಾಹಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅಂಕೋಲಾ ಜನರು ಸ್ವಾತಂತ್ರ್ಯ ಹೋರಾಟ ನಡೆಸಿದವರ ಸಂತತಿ, ಅವರು ಮತ್ತೆ ಹೋರಾಟಕ್ಕೆ ಸಿದ್ಧರಾಗಿದ್ದಾರೆ” ಎಂದರು.

ವಕೀಲ ಉಮೇಶ ನಾಯ್ಕ ಅಭಿಪ್ರಾಯಪಟ್ಟರು: “ಜನರ ಇಚ್ಛೆಗೆ ವಿರುದ್ಧವಾಗಿ ಜಿಲ್ಲೆಯಲ್ಲಿ ಬೇಡದ ಯೋಜನೆಗಳನ್ನು ಹೇರುವ ಪ್ರಯತ್ನ ಸರಿಯಲ್ಲ. ನಾನು ಧರಣಿ ಹಾಗೂ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಬೆಂಬಲ ನೀಡುತ್ತೇನೆ” ಎಂದರು.
ಪತ್ರಕರ್ತ ಮತ್ತು ಹೋರಾಟಗಾರ ಕೆ. ರಮೇಶ್ ಹೇಳಿದರು: “ಈ ಹೋರಾಟವು ಸಂವಿಧಾನದ ಮಾರ್ಗದಲ್ಲಿ ಸಾಗಬೇಕು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಹೋರಾಡುವ ಸಮಯ ಬಂದಿದೆ. ರಾಜ್ಯ ಮಟ್ಟದ ಅನೇಕ ಸಂಘಟನೆಗಳು ಈಗಾಗಲೇ ನಿಮ್ಮ ಬೆಂಬಲಕ್ಕೆ ಸಿದ್ಧವಾಗಿವೆ. ಜನರ ಒಗ್ಗಟ್ಟಿನ ಶಕ್ತಿ ಇಂಥಾ ವಿನಾಶಕಾರಿ ಯೋಜನೆಗಳನ್ನು ತಡೆಯಬಲ್ಲದು” ಎಂದು ಹೇಳಿದರು.
ಬಂದರು ವಿರೋಧಿ ಮುಖಂಡ ಸಂಜೀವ ಬಲೆಗಾರ ಘೋಷಿಸಿದರು: “ಸ್ವಾತಂತ್ರ್ಯ ಹೋರಾಟದ ಆತ್ಮಬಲ ಹಾಗೂ ಜನರ ಮನೋಬಲದಿಂದ ಯೋಜನೆ ಕೈಬಿಡುವವರೆಗೆ ಹೋರಾಟ ನಿಲ್ಲುವುದಿಲ್ಲ. ಅನಿರ್ದಿಷ್ಟಾವಧಿ ಧರಣಿಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು” ಎಂದು.ಈ ಸಂದರ್ಭದಲ್ಲಿ ಅನೇಕ ಹಳ್ಳಿಗಳ ಪ್ರಮುಖರು, ಹೋರಾಟಗಾರರು ಹಾಗೂ ಸಾರ್ವಜನಿಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ವರದಿ: ಕಿರಣ ಗಾಂವಕರ

