ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಲ್ಲಾಲಿಂಗ್ ಕುನ್ನೂರು (33) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದು, ದಕ್ಷ ಅಧಿಕಾರಿಯ ಅಕಾಲಿಕ ಅಗಲಿಕೆ ಪೊಲೀಸ್ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕ ತಂದಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಲ್ಲಾಲಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ, ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಜನಾನುರಾಗಿ ಅಧಿಕಾರಿ: ಯಲ್ಲಾಲಿಂಗ್ ಕುನ್ನೂರು ಅವರು ಮುಂಡಗೋಡ ಠಾಣೆಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ತಮ್ಮ ದಕ್ಷ ಕಾರ್ಯವೈಖರಿ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಅವರು ಜನಾನುರಾಗಿ ಅಧಿಕಾರಿಯಾಗಿ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಮುಂಡಗೋಡಿನ ಮೊದಲು ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿಯೂ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದರು.
ಕಂಬನಿ ಮಿಡಿದ ಗಣ್ಯರು: ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಧಿಕಾರಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರ ನಿಧನಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ಇಲಾಖೆಗೆ ತುಂಬಲಾರದ ನಷ್ಟವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

