ನೆಲಮಂಗಲ: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿ ಹಾಗೂ ಮುಂಬರುವ 2026ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು .ಕೆ.ಆರ್. ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಿನಾಂಕ 02-03-2026 ರಂದು ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿರುವ ಅವರು, ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ನುಡಿಯ ಬೆಳವಣಿಗೆಗೆ ಕಡ್ಡಾಯ ಹಿಂದಿ ಕಲಿಕೆ ತೊಡಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಹಂತದಲ್ಲಿ ಹಿಂದಿಯನ್ನು 100 ಅಂಕಗಳ ಕಡ್ಡಾಯ ವಿಷಯವನ್ನಾಗಿ ಮಾಡಿರುವುದೇ ಈ ಹೇರಿಕೆಗೆ ಮೂಲ ಕಾರಣವಾಗಿದ್ದು, ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡದಿದ್ದರೆ ಕನ್ನಡದ ಉಳಿವಿಗೆ ಕಂಟಕವಾಗಲಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘PWH’ ನಿಯಮ ಜಾರಿಗೆ ಒತ್ತಾಯ: ಭಾರತದ ಸಂವಿಧಾನದ ಅಡಿಯಲ್ಲೇ ಬರುವ ಬಿಹಾರ ರಾಜ್ಯದಲ್ಲಿ ಇಂಗ್ಲಿಷ್ ಕಡ್ಡಾಯವಲ್ಲದ ‘PWE’ (Pass Without English) ಕಾನೂನು ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ, ಕರ್ನಾಟಕದಲ್ಲೂ ತಕ್ಷಣದಿಂದಲೇ ‘PWH’ ಅಂದರೆ ಹಿಂದಿ ಇಲ್ಲದೆ ತೇರ್ಗಡೆ (Pass Without Hindi) ಕಾನೂನನ್ನು ಜಾರಿಗೆ ತರಬೇಕು ಮತ್ತು ಈ ಬಾರಿಯ ಪರೀಕ್ಷೆಯಿಂದಲೇ ಹಿಂದಿಯನ್ನು ಕೈಬಿಡಬೇಕು ಎಂದು ಶಂಕರ್ ಗೌಡ್ರು ಅವರು ಆಗ್ರಹಿಸಿದ್ದಾರೆ.
ತಮ್ಮ ವಾದದ ಪುಷ್ಟಿಗಾಗಿ ಬಿಹಾರದ PWE ಕಾನೂನಿನ ಮಾಹಿತಿಯನ್ನೂ ಮನವಿಯೊಂದಿಗೆ ಸರ್ಕಾರಕ್ಕೆ ಲಗತ್ತಿಸಿದ್ದಾರೆ.
ಪರೀಕ್ಷಾ ಕೊಠಡಿಗೆ ನುಗ್ಗುವ ಎಚ್ಚರಿಕೆ: ಒಂದು ವೇಳೆ ಸರ್ಕಾರವು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ PWH ನಿಯಮ ಜಾರಿ ಮಾಡದಿದ್ದರೆ, ಕನ್ನಡದ ಬೆಳವಣಿಗೆಗಾಗಿ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷಾ ಕೊಠಡಿಗಳಿಗೆ ನುಗ್ಗಿ ಪರೀಕ್ಷೆ ನಡೆಯುವುದನ್ನು ತಡೆಯಲಾಗುವುದು ಎಂದು ಕರ್ನಾಟಕ ರಣಧೀರರ ವೇದಿಕೆಯು ಸರ್ಕಾರಕ್ಕೆ ನೇರ ಎಚ್ಚರಿಕೆ ರವಾನಿಸಿದೆ.
ವಿಕಾಸ ವಾಹಿನಿ ವರದಿ

