ಅಂಕೋಲಾ : ಸಿನಿಮಾ ಸ್ಟೈಲ್‌ನಲ್ಲಿ ಬ್ಯಾಂಕ್ ಗೋಡೆ ಕೊರೆದಿದ್ದ ಖದೀಮರು ಕೊನೆಗೂ ಅಂದರ್..

News Desk
2 Min Read

ಅಂಕೋಲಾ: ಸಿನಿಮಾ ಶೈಲಿಯಲ್ಲಿ ಬ್ಯಾಂಕೊಂದರ ಸ್ಟ್ರಾಂಗ್ ರೂಮ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿದ್ದಲ್ಲದೇ, ತಾಲೂಕಿನಾದ್ಯಂತ ಕೈಚಳಕ ತೋರಿಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಐವರು ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಅಂಕೋಲಾ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ತಾಲೂಕಿನ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆ, ಹೆಗ್ಗಾರಿನ ಕಲ್ಪತರು ವಿವಿದ್ದೋದ್ದೇಶಗಳ ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಕಿರಾಣಿ ಅಂಗಡಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ಕಳೆದ ಜನವರಿ 09 ರಿಂದ 12ರ ನಡುವಿನ ಅವಧಿಯಲ್ಲಿ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸ್ಟ್ರಾಂಗ್ ರೂಮ್ ಹಾಗೂ ಬಾತ್‌ರೂಮ್ ಗೋಡೆಯನ್ನು ಕೊರೆದು ಕಳ್ಳರು ಭಾರೀ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದರು. ಈ ಘಟನೆ ಇಡೀ ತಾಲೂಕಿನಲ್ಲಿ ಸಂಚಲನ ಮೂಡಿಸಿತ್ತು. ಇದಲ್ಲದೇ ಹೆಗ್ಗಾರಿನ ಕಲ್ಪತರು ಸಹಕಾರಿ ಸಂಘದಿಂದ 8,000 ರೂಪಾಯಿ ನಗದು ಹಾಗೂ ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್‌ನಿಂದ 10,000 ರೂಪಾಯಿ ಮತ್ತು ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದರು.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೂತನ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ತಾಂತ್ರಿಕ ಸೆಲ್ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಮಾರ್ಚ್ 1ರಂದು ಹಳವಳ್ಳಿಯ ವಿನಾಯಕ ಕಮಲಾಕರ ಸಿದ್ದಿ (19), ನಾಗೇಶ ಸುಬ್ರಾಯ ಸಿದ್ದಿ (24), ದುಗ್ಗದಮನೆಯ ರಾಜೇಶ ಲಕ್ಷ್ಮಣ ಸಿದ್ದಿ (27), ಮಳಲ್‌ಗಾವದ ಪ್ರಶಾಂತ ಅನಂತ ಸಿದ್ದಿ (19) ಹಾಗೂ ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ದಿ (38) ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಬೈಕ್‌ಗಳು, ಒಂದು ಏಸರ್ ಟ್ಯಾಬ್ ಹಾಗೂ ಗೋಡೆ ಕೊರೆಯಲು ಬಳಸಿದ್ದ ಇತರ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಡಿವೈಎಸ್ಪಿ ಗಿರೀಶ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿ.ಎಸ್.ಐ.ಗಳಾದ ವಿಶ್ವನಾಥ ನಿಂಗೋಳ್ಳಿ, ಗುರುನಾಥ ಹಾದಿಮನಿ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು, ಹಿರಿಯ ಅಧಿಕಾರಿಗಳು ಪೊಲೀಸ್ ತಂಡದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Share This Article
Leave a Comment