ಅಂಕೋಲಾ: ಸ್ವಾಗತ ದ್ವಾರದಲ್ಲೇ ಕತ್ತಲೆಯ ದರ್ಶನ : ಪಟ್ಟಣದ ಪ್ರಮುಖ ರಸ್ತೆಯಲ್ಲಿ ಆವರಿಸಿದ ಅವ್ಯವಸ್ಥೆಯ ಕಾರ್ಮೋಡ.!

News Desk
2 Min Read

ಅಂಕೋಲಾ: ಪಟ್ಟಣಕ್ಕೆ ಬರುವವರನ್ನು ಸ್ವಾಗತಿಸಬೇಕಾದ ಹೆಬ್ಬಾಗಿಲು ಸದಾ ಪ್ರಕಾಶಮಾನವಾಗಿರಬೇಕು. ಆದರೆ, ಅಂಕೋಲಾ ಪಟ್ಟಣದ ‘ಸ್ವಾಗತ ದ್ವಾರ’ದಿಂದ ಹಿಡಿದು ಬಸ್ ನಿಲ್ದಾಣದವರೆಗಿನ ಪ್ರಮುಖ ರಸ್ತೆ ಈಗ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಪಟ್ಟಣದ ಸೌಂದರ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಡಿವೈಡರನ ಮೇಲೆ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳು ಕೆಟ್ಟರು ಸಂಬಂಧಪಟ್ಟ ಇಲಾಖೆಗಳು ಇನ್ನು ಅದನ್ನು ಸರಿ ಪಡಿಸುವ ಕಾರ್ಯ ಮಾಡಿಲ್ಲ.

ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಅಳವಡಿಸಲಾದ ಈ ದೀಪಗಳು, ನಿರ್ವಹಣೆಯ ಕೊರತೆಯಿಂದಾಗಿ ಇಂದು ನಿರುಪಯುಕ್ತ ಕಂಬಗಳಾಗಿ ನಿಂತಿವೆ. ಕತ್ತಲಾದ ನಂತರ ಈ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಒಂದು ಸಾಹಸವೇ ಸರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಪಟ್ಟಣದ ಯಾವುದೋ ಮೂಲೆಯ ರಸ್ತೆಯಲ್ಲ..!!

ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣದ ಹೃದಯಭಾಗಕ್ಕೆ ಸಂಪರ್ಕ ಕಲ್ಪಿಸುವ ಜೀವನಾಡಿ. ನಿತ್ಯ ಇದೇ ರಸ್ತೆಯಲ್ಲಿ ಅನೇಕ ಜನರು ಸಂಚರಿಸುತ್ತಾರೆ. ಹಗಲಿನಲ್ಲಿ ರಸ್ತೆಯ ಅಂದದ ಬಗ್ಗೆ ಮಾತನಾಡುವವರು, ರಾತ್ರಿಯಾಗುತ್ತಿದ್ದಂತೆ ಆವರಿಸುವ ಈ ಕತ್ತಲನ್ನು ನೋಡುವಂತ ಪರಿಸ್ಥಿತಿ ಎದುರಾಗಿದೆ. ಬೀದಿದೀಪಗಳ ನಿರ್ವಹಣೆಗೆಂದೇ ಪ್ರತ್ಯೇಕ ವ್ಯವಸ್ಥೆ ಮತ್ತು ಜವಾಬ್ದಾರಿಗಳು ಇರುತ್ತವೆ. ಆದರೆ, ಇಡೀ ರಸ್ತೆಯ ದೀಪಗಳು ಹಾಳಾಗಿ ನಿಂತಿದ್ದರೂ, ಅದನ್ನು ಸರಿಪಡಿಸುವ ಇಚ್ಛಾಶಕ್ತಿ ಸಂಬಂಧಪಟ್ಟವರಲ್ಲಿ ಕಾಣುತ್ತಿಲ್ಲ.

ಕೇವಲ ದೂರುಗಳು ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಅಥವಾ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಜಾರಿಕೊಳ್ಳುವ ಪ್ರವೃತ್ತಿ ಇಲ್ಲಿ ಎದ್ದು ಕಾಣುತ್ತಿದೆ. ಈ ಅವ್ಯವಸ್ಥೆಯು ಈಗ ಅಪಘಾತಗಳಿಗೆ ಮುಕ್ತ ಆಹ್ವಾನ ನೀಡುತ್ತಿದೆ. ರಸ್ತೆ ಡಿವೈಡರನ ದೀಪಗಳು ಇಲ್ಲದ ಕಾರಣ, ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಚಾಲಕರ ಕಣ್ಣು ಕುಕ್ಕುತ್ತದೆ. ಇದರಿಂದ ರಸ್ತೆಯ ಡಿವೈಡರನ ಕಾಣದೇ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆಗಳೇ ಹೆಚ್ಚು.

ಅಲ್ಲದೆ, ಬಸ್ ನಿಲ್ದಾಣಕ್ಕೆ ನಡೆದು ಹೋಗುವ ಪ್ರಯಾಣಿಕರು, ಮಹಿಳೆಯರು ಮತ್ತು ವೃದ್ಧರಿಗೆ ಈ ಕತ್ತಲು ಅಭದ್ರತೆಯ ಭಾವನೆ ಮೂಡಿಸುತ್ತಿದೆ. ರಸ್ತೆ ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಪಾದಚಾರಿಗಳು ಕಾಣಿಸದೇ ಹೋದರೆ ದೊಡ್ಡ ಅನಾಹುತವೇ ಸಂಭವಿಸಬಹುದು.

ಒಟ್ಟಿನಲ್ಲಿ, ‘ದೀಪದ ಕೆಳಗೆ ಕತ್ತಲು’ ಎಂಬ ಗಾದೆ ಮಾತು ಅಂಕೋಲಾದ ಈ ಪ್ರಮುಖ ರಸ್ತೆಗೆ ಅನ್ವರ್ಥವಾಗುತ್ತಿದೆ. ಸಣ್ಣ ಪುಟ್ಟ ದುರಸ್ತಿ ನೆಪವೊಡ್ಡಿ ಇಡೀ ರಸ್ತೆಯನ್ನೇ ಕತ್ತಲಲ್ಲಿ ಇಡುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು, ವಾಸ್ತವವನ್ನು ಅರಿತು ಕೂಡಲೇ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಅನಾಹುತ ನಡೆದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ, ಮುಂಜಾಗ್ರತೆ ವಹಿಸಿ ನಾಗರಿಕರ ಜೀವ ರಕ್ಷಿಸುವುದು ಜಾಣತನದ ನಡೆಯಾಗಲಿದೆ.

Share This Article