ಅಂಕೋಲಾದಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ..

News Desk
1 Min Read

ಅಂಕೋಲ ತಾಲೂಕಿನ ಕಿತ್ತೂರ ರಾಣಿ ಚೆನ್ನಮ್ಮ ರಸ್ತೆಯಲ್ಲಿ ಇಂದು ಬೆಳಿಗ್ಗೆ 11 :30 ಗಂಟೆಗೆ ಅಕ್ರಮವಾಗಿ ಕೆಂಪು ಚಿರೆಕಲ್ಲು ಸಾಗಿಸುತ್ತಿದ್ದ ಟಾಟಾ ಎಸ್ (KA-22-A-6501) ವಾಹನವನ್ನು ತಹಶೀಲ್ದಾರ ಚಿಕ್ಕಪ್ಪ ನಾಯಕ ತಡೆದಿದ್ದಾರೆ. ಹಿಂಬದಿ ಓಪನ್ ಗಾಡಿಯಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿದ್ದ ಚಿರೆಕಲ್ಲುಗಳು ತಹಶೀಲ್ದಾರರ ಗಮನಕ್ಕೆ ಬಿದ್ದಿವೆ.

ರೌಂಡ್ಸ್ ವೇಳೆ ವಾಹನವನ್ನು ನಿಲ್ಲಿಸಿದ ತಕ್ಷಣ, ಚಾಲಕ ಸ್ವಾಮಿ “ಬಿಟ್ಟು ಬಿಡಿ, ಮತ್ತೆ ಮಾಡಲ್ಲ” ಎಂದು ಬೇಡಿಕೊಂಡಿದ್ದರೂ, ಯಾವುದೇ ಪ್ರಭಾವಕ್ಕೆ ಒಳಗಾಗದೆ ತಹಶೀಲ್ದಾರರು ಕಾನೂನು ಕ್ರಮಕ್ಕೆ ಮುಂದಾದರು. ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದ ಕಾರಣ, ಈ ರೀತಿಯ ಸಾಗಾಟ ನೇರವಾಗಿ ಅಕ್ರಮ ದಂಧೆ ಎಂದು ಪರಿಗಣಿಸಲಾಗಿದೆ.

ತಕ್ಷಣ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ತಹಶೀಲ್ದಾರರ ಸೂಚನೆಯ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಭಾರ್ಗವ ನಾಯಕ ಉಪಸ್ಥಿತರಿದ್ದರು.

ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಸಾಗಾಟವು MMDR Act, 1957 ಹಾಗೂ BNS ಸೆಕ್ಷನ್ 303 (ಕಳವು ಸಂಬಂಧಿತ ಪ್ರಕ್ರಿಯೆ) ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇನ್ನೂ ಅಧಿಕೃತವಾಗಿ ಲಭ್ಯವಾಗಬೇಕಿದೆ. ಆದರೂ, ಹಗಲಿರುಳು ಕಲ್ಲು ಸಾಗಿಸುವವರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

ತಹಶೀಲ್ದಾರ ಚಿಕ್ಕಪ್ಪ ನಾಯಕ ಅವರ ದಕ್ಷತೆ ಹಾಗೂ ನಿರ್ಧಾರಶೀಲತೆಯಿಂದ ಅಕ್ರಮ ದಂಧೆಗೆ ಕಡಿವಾಣ ಬೀಳಲಿದೆ ಎಂಬ ವಿಶ್ವಾಸ ಸ್ಥಳೀಯರಲ್ಲಿ ಮೂಡಿದೆ.

Share This Article