ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜೇಶ ಆರ್. ನಾಯ್ಕ ಅವರ ಮೇಲೆ ನಡೆದಿರುವ ಹಲ್ಲೆ ಹಾಗೂ ಕೊಲೆ ಬೆದರಿಕೆ ಘಟನೆಯನ್ನು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ತಕ್ಷಣವೇ ಕಠಿಣ ಶಿಕ್ಷೆಯಾಗಬೇಕು, ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಪಿಡಿಒ ಸಂಘದ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ವಿವರ: ದಿನಾಂಕ 31-03-2026 ರಂದು ಮಧ್ಯಾಹ್ನ 1:00 ಗಂಟೆಗೆ ಶಿರಳಗಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪಿಡಿಒ ರಾಜೇಶ ಆರ್. ನಾಯ್ಕ ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ವಡಗೇರಿ ನಿವಾಸಿ ಪ್ರಭು ದೊಡ್ಮನೆ ಎಂಬಾತನು ಅಲ್ಲಿಗೆ ಬಂದಿದ್ದನು. ಕಳೆದ 8-10 ದಿನಗಳ ಹಿಂದೆ ಆತನ ಪತ್ನಿ ಕಾವ್ಯಶ್ರೀ ಹೆಸರಿನಲ್ಲಿ ಉದ್ಯಮ ಪರವಾನಗಿಗಾಗಿ ಅರ್ಜಿಯನ್ನು ನೀಡಲಾಗಿತ್ತು.
ಅರ್ಜಿಯಲ್ಲಿನ ಮಾಹಿತಿಗಳು ಅಸ್ಪಷ್ಟವಾಗಿದ್ದ ಕಾರಣ, ಕೆಲವು ದಾಖಲೆಗಳನ್ನು ಲಗತ್ತಿಸಿ ನೀಡುವಂತೆ ಪಿಡಿಒ ಅವರು ಆಪಾದಿತನಿಗೆ ಸೂಚಿಸಿದ್ದರು. ಮಾರ್ಚ್ ತಿಂಗಳ ಅಂತ್ಯವಿದ್ದ ಕಾರಣ ಕರ್ತವ್ಯದ ಒತ್ತಡ ಹೆಚ್ಚಾಗಿದ್ದು, ಗುರುವಾರ ಹಿಂಬರಹ ನೀಡುವುದಾಗಿ ತಿಳಿಸಿ ಪಿಡಿಒ ಅವರು ಊಟಕ್ಕೆ ತೆರಳುತ್ತಿದ್ದರು. ಈ ವೇಳೆ ಆಪಾದಿತ ಪ್ರಭು ದೊಡ್ಮನೆ ಅವರನ್ನು ಅಡ್ಡಗಟ್ಟಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. “ನೀನು ಸರ್ಕಾರದ ಕೆಲಸ ಮಾಡಲು ನಾಲಾಯಕ ಇದ್ದೀಯಾ” ಎಂದು ಬೈದು, ಕೈಯಿಂದ ಮೈಮೇಲೆ ಹಲ್ಲೆ ಮಾಡಿ ನೋವುಂಟು ಮಾಡಿದ್ದಾನೆ. ಅಲ್ಲದೆ, “ಈ ಪಂಚಾಯತದಲ್ಲಿ ಹೇಗೆ ಕೆಲಸ ಮಾಡುತ್ತೀಯಾ ನಾನು ನೋಡುತ್ತೇನೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಲೆ ಮಾಡುತ್ತೇನೆ” ಎಂದು ಜೀವಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಕರಣ ದಾಖಲು: ಹಲ್ಲೆಗೊಳಗಾದ ಪಿಡಿಒ ರಾಜೇಶ ನಾಯ್ಕ ಅವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ ಬಳಿಕ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆಪಾದಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 115(2), 126(2), 132, 121(1), 352, ಮತ್ತು 351(2) ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR No: 0080/2026) ದಾಖಲಾಗಿದೆ.
ಹೋರಾಟದ ಎಚ್ಚರಿಕೆ: ಗ್ರಾಮ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಪಿಡಿಒಗಳ ಮೇಲೆ ಇಂತಹ ರೌಡಿವರ್ತನೆ ಮತ್ತು ಹಲ್ಲೆಗಳು ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ಮೇಲಿನ ಪ್ರಹಾರವಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಿ, ಆತನಿಗೆ ತಕ್ಕ ಕಾನೂನು ಶಿಕ್ಷೆಯಾಗಬೇಕು. ಒಂದು ವೇಳೆ ಆರೋಪಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ವಿಳಂಬವಾದರೆ ಅಥವಾ ಶಿಕ್ಷೆಯಾಗದಿದ್ದರೆ, ಜಿಲ್ಲಾದ್ಯಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ಹಾಗೂ ಹೋರಾಟವನ್ನು ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಗಿರೀಶ್ ನಾಯಕ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಕಾಸ ವಾಹಿನಿ ವರದಿ

