
ಕಾರವಾರ, ಮೇ 29: ಜಿಲ್ಲಾ ಆಯುಷ್ ಇಲಾಖೆಯ ಕಚೇರಿ, ಕಾರವಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ ಹಾಕಲಾಗಿರುವ ಬೋರ್ಡ್ ಕುರಿತು ಗಂಭೀರ ದಿಕ್ಕು ತಪ್ಪಿಸುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೋರ್ಡಿನಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಎಂಬ ಸ್ಥಾನಕ್ಕೆ ತಪ್ಪಾಗಿ “ಉಪ ಕಾರ್ಯದರ್ಶಿಗಳು (ಆಡಳಿತ), ಜಿಲ್ಲಾ ಪಂಚಾಯತ್ ಉತ್ತರ ಕನ್ನಡ” ಎಂಬ ಉಲ್ಲೇಖ ನೀಡಲಾಗಿದೆ. ಈ ಮೂಲಕ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಆಯುಷ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ – ಎರಡು ಭಿನ್ನ ಇಲಾಖೆ..
ಇಲ್ಲಿ ಗಮನಾರ್ಹ ವಿಷಯವೆಂದರೆ, ಜಿಲ್ಲಾ ಆಯುಷ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳ ಕಚೇರಿ ಎಂಬುವು ಸಂಪೂರ್ಣವಾಗಿ ವಿಭಿನ್ನ ಸರ್ಕಾರಿ ಪ್ರಾಧಿಕಾರಗಳಾಗಿವೆ. ಆಯುಷ್ ಇಲಾಖೆ ಆರೋಗ್ಯ ಮತ್ತು ಚಿಕಿತ್ಸಾ ಪದ್ಧತಿಗಳ (ಆಯುರ್ವೆದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ, ಹೋಮಿಯೋಪಥಿ) ನಿರ್ವಹಣೆಗೆ ಸಂಬಂಧಿಸಿದವಾಗಿದ್ದು, ಅದು ಆರೋಗ್ಯ ಇಲಾಖೆಯ ಅಂಗವಾಗಿರುತ್ತದೆ.ಇದಕ್ಕೆ ವಿರುದ್ಧವಾಗಿ, ಜಿಲ್ಲಾ ಪಂಚಾಯತ್ ಇದು ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ನಿರ್ವಹಣೆಯ ಪ್ರಾಥಮಿಕ ಘಟಕವಾಗಿದೆ, ಮತ್ತು ಉಪ ಕಾರ್ಯದರ್ಶಿಗಳ ಹೊಣೆಗಳು ಆ ವಲಯಕ್ಕೆ ಸೀಮಿತವಾಗಿರುತ್ತವೆ.
ಹೀಗಾಗಿ, ಪ್ರಥಮ ಮೇಲ್ಮನವಿ ಪ್ರಾಧಿಕಾರ ಎಂಬ ನಿಗದಿತ ಹುದ್ದೆಯನ್ನು ಬೇರೆ ಇಲಾಖೆಯ ಅಧಿಕಾರಿಗೆ ನೀಡಿರುವುದು ಅಥವಾ ತೋರಿಸಿರುವುದು ಅಕ್ಷರಶಃ ಕಾನೂನುಬದ್ಧ ತಪ್ಪು ಆಗಿದ್ದು, ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವನ್ನೇ ದಿಕ್ಕು ತಪ್ಪಿಸುತ್ತಿದೆ..

ಅರ್ಜಿದಾರನ ಅನುಭವದಿಂದ ಬೋರ್ಡಿನ ತಪ್ಪು ಬಹಿರಂಗ..
ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪ್ರಥಮ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದ ಸಾರ್ವಜನಿಕರು ಈ ಬೋರ್ಡಿನ ಆಧಾರದ ಮೇಲೆ ಉಪ ಕಾರ್ಯದರ್ಶಿಗಳಿಗೆ ಪಂಚಾಯತ್ ಉತ್ತರ ಕನ್ನಡ ರವರಿಗೆ ಅರ್ಜಿ ಸಲ್ಲಿಸಿದರು. ಆದರೆ ಅವರು ಅರ್ಜಿಯನ್ನು ಮತ್ತೆ ಆಯುಷ್ ಇಲಾಖೆಗೆ ಹಿಂದಿರುಗಿಸಿದರು ಎನ್ನಲಾಗಿದೆ . ಈ ಹಂತದಲ್ಲಿ ಅರ್ಜಿದಾರರ ಸಮಯ, ಶ್ರಮ ಮತ್ತು ಹಕ್ಕುಗಳಿಗೆ ಧಕ್ಕೆಯುಂಟಾಗಿದೆ.
ಕಾನೂನುಬದ್ಧ ವಿಮರ್ಶೆ: ಸೆಕ್ಷನ್ 4(1)(b) ಮತ್ತು 19ರ ಉಲ್ಲಂಘನೆ
RTI ಕಾಯ್ದೆಯ ಸೆಕ್ಷನ್ 4(1)(b) ಪ್ರಕಾರ, ಸಾರ್ವಜನಿಕ ಪ್ರಾಧಿಕಾರವು ತನ್ನ ಅಧಿಕಾರಿಗಳು, ಕಾರ್ಯಗಳು ಹಾಗೂ ಮಾಹಿತಿಯು ನಿಖರವಾಗಿರುವಂತೆ ಪ್ರಕಟಿಸಬೇಕು.ಅದೇ ರೀತಿ, ಸೆಕ್ಷನ್ 19 ಪ್ರಕಾರ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಎಂಬ ಹುದ್ದೆ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಉನ್ನತ ಹುದ್ದೆಯ ಅಧಿಕಾರಿಯಾಗಿರಬೇಕು – ಇದು ನಿಯಮ.ಈ ಹಿನ್ನೆಲೆಯಲ್ಲಿಯೇ ಈ ತಪ್ಪು ಉಲ್ಲೇಖ ಕೇವಲ ನಿರ್ಲಕ್ಷ್ಯವೋ? ಇಲ್ಲವೇ ಜಾಣ್ಮೆಯಿಂದ ದಿಕ್ಕು ತಪ್ಪಿಸುವ ಉದ್ದೇಶವೋ? ಎಂಬುದು ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸಾರ್ವಜನಿಕರಿಂದ ಆಗ್ರಹ : ಸ್ಪಷ್ಟನೆ ಹಾಗೂ ತಕ್ಷಣ ಕ್ರಮ ಆಗಬೇಕು..
ಈ ಗೊಂದಲದ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕು ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕೆಳಕಂಡ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ:
1. ತಪ್ಪು ಬೋರ್ಡನ್ನು ತಕ್ಷಣವಾಗಿ ತೆರವುಗೊಳಿಸಬೇಕು.
2. ಸರಿಯಾದ ಪ್ರಾಧಿಕಾರಿಗಳ ಹೆಸರುಗಳೊಂದಿಗೆ ಹೊಸ ಬೋರ್ಡನ್ನು ಸ್ಥಾಪಿಸಬೇಕು.
3. ಜವಾಬ್ದಾರಿಗಳನ್ನು ನಿಗದಿಪಡಿಸಿ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು.
4. ಇಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಸೂಕ್ತ ಪರಿಶೀಲನೆ ಹಾಗೂ ಗಮನವಿರುವ ವ್ಯವಸ್ಥೆ ರೂಪಿಸಬೇಕು.
ಮಾಹಿತಿಯ ಹಕ್ಕು ಎಂದರೆ ಪಾರದರ್ಶಕ ಆಡಳಿತದ ಬುನಾದಿ. ಇಂಥ ತಪ್ಪು ಬೋರ್ಡುಗಳು ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತರುತ್ತವೆ. ಸರಕಾರದ ಪ್ರತಿಯೊಂದು ಇಲಾಖೆಯು ನಿಯಮಾನುಸಾರ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವನ್ನು ಈ ಘಟನೆ ಮತ್ತೆ ಸಾಬೀತುಪಡಿಸಿದೆ.

