
ಅಂಕೋಲಾ, ಮೇ ೨೨: ಅಂಕೋಲಾ ತಾಲೂಕಿನ ಬೆಲೆಕೇರಿ ಪಂಚಾಯತ್ ವ್ಯಾಪ್ತಿಯ ಖಾರ್ವಿವಾಡ ಮತ್ತು ಬಂಗ್ಲೆವಾಡ ಪ್ರದೇಶದಲ್ಲಿ ಬೀದಿ ನಾಯಿಯ ದಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಒಂದು ವರ್ಷದ ನಾಯಿ ದಾರಿಹೋಕರು ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿದ್ದು, ಇದೀಗ ನಾಲ್ವರು ಜನರು ಗಾಯಗೊಂಡಿದ್ದಾರೆ.
ನಿನ್ನೆ ದಿನ, ಬೀದಿ ನಾಯಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸೀರೆ ಕಚ್ಚಿ ಎಳೆದಾಡಿದೆ. ಬೀದಿ ನಾಯಿ ಒಟ್ಟು ಏಳು ಜನರ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಸ್ಥಳೀಯರು ಜಾಗೃತರಾದರೂ, ಇನ್ನೂ ಮೂವರು ಸ್ಥಳೀಯರು ನಾಯಿಯ ಕಚ್ಚುವಿಕೆಗೆ ಒಳಗಾಗಿದ್ದಾರೆ. ಗಾಯಾಳುಗಳು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ನಾಗರಿಕರು ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದರೂ, ಯಾವುದೇ ತುರ್ತು ಕ್ರಮ ಕೈಗೊಳ್ಳಲಾಗಿಲ್ಲ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರೂ, ಇನ್ನೂ ಯಾವುದೇ ನಾಯಿ ಹಿಡಿಯುವ ಕ್ರಮ ಕೈಗೊಂಡಿಲ್ಲ ಎಂಬುದು ವಿಷಾದಕರ ಸಂಗತಿ.
ಶಾಲಾ ಆರಂಭದ ದಿನಗಳು ಹತ್ತಿರವಾಗಿರುವ ಈ ಸಮಯದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆ ಮುಖ್ಯವಾಗಿದ್ದು, ಈ ಸಂಬಂಧ ತ್ವರಿತವಾಗಿ ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅರವಿಂದ್ ಕುಡ್ತಳಕರ್, ಸೂರಜ್ ಬಾನಾವಳಿಕರ್, ಧ್ರುವ ಬಾನಾವಳಿಕರ್, ಪುಂಡಲಿಕ ಬಾನಾವಳಿಕರ್, ಪ್ರಕಾಶ್ ಬಾನವಳಿಕರ್ ಅವರು ವಿಕಾಸ ವಾಹಿನಿಯ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

