ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ ಶುದ್ಧೀಕರಣ ಕಾರ್ಯಕ್ಕೆ ಸಜ್ಜು – ಜನಸ್ನೇಹಿ ಅಧಿಕಾರಿ ಹೆಚ್. ಅಕ್ಷತಾ ಅವರಿಂದ ಭರವಸೆ..

News Desk
1 Min Read

ಅಂಕೋಲಾ: ಮುಂಗಾರು ಕಾಲದ ಮೊದಲು ಮುನ್ನೆಚ್ಚರಿಕಾ ಕ್ರಮವಾಗಿ, ಅಂಕೋಲಾ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಚರಂಡಿಗಳ ಶುದ್ಧೀಕರಣ ಕಾರ್ಯ ಆರಂಭಿಸಲು ಪುರಸಭೆ ಸಜ್ಜಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ .ಹೆಚ್. ಅಕ್ಷತಾ ಅವರು, “ಒಂದು ವಾರದೊಳಗೆ ಹೂಳು ತೆಗೆಯುವ ಕಾರ್ಯ ಪ್ರಾರಂಭವಾಗುತ್ತದೆ. ಜನರ ಆರೋಗ್ಯ ಮತ್ತು ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ” ಎಂದು ವಿಕಾಸ ವಾಹಿನಿಗೆ ತಿಳಿಸಿದ್ದಾರೆ.

ಅಕ್ಷತಾ ಅವರು ತಮ್ಮ ಕಾರ್ಯಕ್ಷಮತೆ, ಚುರುಕು ನಡತೆ ಮತ್ತು ಪ್ರಾಮಾಣಿಕ ಕಾಳಜಿಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂಕೋಲಾ ನಗರದಲ್ಲಿ ಬೆಳಗಿನ ಜಾವ ಪೌರಕಾರ್ಮಿಕರ ಜೊತೆ ಸ್ವಚ್ಛತೆಯಲ್ಲಿ ತಾವು ಕೂಡ ನೇರವಾಗಿ ಭಾಗವಹಿಸಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ…

ಈ ನಡುವೆ ಕೆಲವು ವಾರ್ಡ್‌ಗಳಲ್ಲಿ ಚರಂಡಿಗಳ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕರು ತಮ್ಮ ಅಳಲನ್ನು ಹೊರಹಾಕಿದ್ದಾರೆ. ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವುದರಿಂದ ಕೆಲ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು, “ಮುಖ್ಯಾಧಿಕಾರಿ ತ್ವರಿತ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿರುವ ಪುರಸಭೆ ಮಂಡಳಿ ಈ ಶುದ್ಧೀಕರಣ ಕಾರ್ಯದಲ್ಲಿ ಕ್ರಿಯಾಶೀಲ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ. .

ನಗರದ ಅಭಿವೃದ್ಧಿಯತ್ತ ಮತ್ತೊಂದು ಪ್ರಾಮಾಣಿಕ ಹೆಜ್ಜೆ ಇಡುವ ಸಲುವಾಗಿ ಪುರಸಭೆ ಚರಂಡಿ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ನಂಬಿಕೆಯನ್ನು ಮೂಡಿಸಿದೆ. ಮುಖ್ಯಾಧಿಕಾರಿ ಅಕ್ಷತಾ ಅವರ ಜನಸ್ನೇಹಿ ನಡವಳಿಕೆ ಹಾಗೂ ತ್ವರಿತ ಪ್ರತಿಕ್ರಿಯೆ ನಾಗರಿಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಸಾರ್ವಜನಿಕ ಸಹಕಾರ ಈ ಕಾರ್ಯಕ್ಕೆ ಇನ್ನಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ..

Share This Article
Leave a Comment