
11 Jan 2025, 10:49 am, 1207 reads
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯು ದೇಶದ ಕೋಟ್ಯಂತರ ಕುಶಲಕರ್ಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಪಿಎಂ ವಿಶ್ವಕರ್ಮ ಯೋಜನೆ ಅಡಿ ನೊಂದಾಯಿಸಿ ತರಬೇತಿ ಮುಗಿಸಿದ ಫಲಾನುಭವಿಗಳಿಗೆ ತಾಲೂಕಿನ ಬ್ಯಾಂಕುಗಳು ಸಾಲ ಸೌಲಭ್ಯ ನೀಡಲು ವಂಚಿಸುತ್ತಿದ್ದು. ಬ್ಯಾಂಕ್ ಅಧಿಕಾರಿಗಳ ಅಸಡ್ಡೆ ವರ್ತನೆ ಕುರಿತು ಮಹಿಳೆಯರು ಬ್ಯಾಂಕ್ ನ ಅಧಿಕಾರಿಗಳ ವಿರುದ್ಧ ಹಿಡಿಶಾಪ್ ಹಾಕುತ್ತಿರುವ ಘಟನೆ ನಡೆಯುತ್ತಿದೆ.
ಏನಿದು ಯೋಜನೆ?
ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು 13 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದೆ.

ದೇಶದಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಗುರಿಯಾಗಿದೆ.
ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಈ ಯೋಜನೆಯ ಅನುದಾನವನ್ನು ಭರಿಸಲಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 30 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲು ಯೋಜನೆ ಯನ್ನು ಕಾರ್ಯರೂಪಕ್ಕೆ ತರಲಾಗಿದೆ.
ಕೇಂದ್ರ ಸರ್ಕಾರದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯವು ಈ ಯೋಜನೆಯ ನೋಡಲ್ ಏಜೆನ್ಸಿಯಾಗಿರುತ್ತದೆ. ಮುಖ್ಯವಾಗಿ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಪ್ರಮಾಣದ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಸಣ್ಣ ಹಣಕಾಸು ಸಂಸ್ಥೆಗಳಿಂದ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ಎಲ್ಲಾ ರೀತಿಯ ಸುತ್ತೋಲೆಗಳನ್ನು ಜಾರಿಗೆ ತರಲಾಗಿದೆ.

ಫಲಾನುಭವಿಗೆ ಟೂಲ್ ಕಿಟ್ ಖರೀದಿಗಾಗಿ ಯೋಜನೆಯಡಿ ₹15 ಸಾವಿರ ಮೌಲ್ಯದ ಇ–ವೋಚರ್ಸ್ ಅಥವಾ ಇ–ರುಪಿ ನೀಡಲಾಗುತ್ತದೆ.
ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ಗಳನ್ನು ಬ್ಯಾಂಕ್ ಮೂಲಕ ನೀಡಲಾಗುತ್ತದೆ.ಯೋಜನೆಯಡಿ ನೋಂದಣಿಯಾದ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ತರಬೇತಿಯನ್ನು ನೀಡಲಾಗುತ್ತದೆ.
ಶೇ 5ರಷ್ಟು ಬಡ್ಡಿದರದ ಅಡಿ ಒಟ್ಟು 3 ಲಕ್ಷ ರೂಪಾಯಿಯ ಖಾತರಿ ರಹಿತ ಬ್ಯಾಂಕ್ ಸಾಲ ದೊರೆಯಲಿದೆ. ಮೊದಲ ಕಂತಿನಲ್ಲಿ ದೊರೆತ 1 ಲಕ್ಷ ರೂಪಾಯಿ ಸಾಲಕ್ಕೆ 18 ತಿಂಗಳ ಮರುಪಾವತಿ ಗಡುವು ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ ದೊರೆತ 2 ಲಕ್ಷ ರೂಪಾಯಿ ಸಾಲ ಮರುಪಾವತಿಗೆ 30 ತಿಂಗಳ ಗಡುವು ನೀಡಲಾಗುತ್ತದೆ.

ತರಬೇತಿ ಮುಗಿಸಿದ ಮಹಿಳೆಯರಿಗೆ ಸಿಗುತ್ತಿಲ್ಲ ಸಾಲ ಸೌಲಭ್ಯ, ಮಹಿಳೆಯರಿಂದ ಹಿಡಿ ಶಾಪ:
ಪಿಎಂ ವಿಶ್ವಕರ್ಮ ಯೋಜನೆ ಅಡಿ ತರಬೇತಿಗೆ ಹೋಗಿ 5-7 ದಿನಗಳನ್ನು ಪೂರೈಸಿದ ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಸದರಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬ್ಯಾಂಕಿನಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಕೇಳಲು ಹೋದ ಮಹಿಳೆಯರಿಗೆ ಅಂಕೋಲಾದ ಕೆಲವು ಬ್ಯಾಂಕಿನ ವ್ಯವಸ್ಥಾಪಕ ಮ್ಯಾನೇಜರ್ ಗಳೂ ಫಲಾನುಭವಿಗಳ ಸಿಬಿಲ್ ಸ್ಕೋರ್ ಗರಿಷ್ಠ ಮಟ್ಟದಲ್ಲಿ ಇದ್ದರೆ ಮಾತ್ರ ಸಾಲ ಸೌಲಭ್ಯ ಕೊಡುದಾಗಿ ಹೇಳುತ್ತಿದ್ದು. ಇನ್ನು ಕೆಲವು ಬ್ಯಾಂಕ್ ಮ್ಯಾನೇಜರ್ಗಳು ಮೊದಲ ಹಂತದಲ್ಲಿ ಫಲಾನುಭವಿಗಳಿಗೆ ಸಿಗಬೇಕಾದ ಸಾಲದ ರೂಪದ 1 ಲಕ್ಷ ಹಣವನ್ನು ನೀಡಲು ಸಾಧ್ಯವಿಲ್ಲ.ಕೇವಲ 20000₹ ಮಾತ್ರ ಸಾಲ ನೀಡುತ್ತೇವೆ ಎಂದು ಫಲಾನುಭವಿಗಳಿಗೆ ನಿರಾಶೆಯನ್ನು ಉಂಟುಮಾಡುತ್ತಿದ್ದಾರೆ.

ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವಂತೆ ಬಡವರ್ಗದ ಶ್ರೀಸಾಮಾನ್ಯನಿಗೆ ದೊರುಕುವ ಸಾಲ ಸೌಲಭ್ಯಗಳನ್ನು ಬ್ಯಾಂಕುಗಳು ನೀಡದೆ ಸತಾಯಿಸುತ್ತಿದ್ದು. ಮಹಿಳೆಯರು ಬ್ಯಾಂಕುಗಳ ಹಿಟ್ಲರ್ ಆಡಳಿತದ ವಿರುದ್ಧ ರೋಷಿಹೋಗಿದ್ದಾರೆ.
ಯಾವುದೇ ಯೋಜನೆ ಬಂದರೂ ಕೂಡ ಬಡ ಮಧ್ಯಮ ವರ್ಗದ ಫಲಾನುಭವಿಗಳಿಗೆ ಅಧಿಕಾರಿಶಾಹಿ ವರ್ಗದ ದರ್ಪದಿಂದ ಸಿಗುವ ಸಾಲ ಸೌಲಭ್ಯ ದೊರಕದೇ ಕರ ಕುಶಲಿಗಳ ಜೀವನ ಅಭಿವೃದ್ಧಿ ಮಾಡಲು ಹೊರಡಿಸಿರುವ ಯೋಜನೆಗಳು ಕೇವಲ ರಾಜಕೀಯ ಪ್ರಚಾರಕಷ್ಟೇ ಸೀಮಿತವಾದಂತೆ ಬಾಸವಾಗುತ್ತಿದೆ .
ಬಡ ಮತ್ತು ಮಧ್ಯಮ ವರ್ಗದ ಸ್ವಾವಲಂಬಿ ಜೀವನಕ್ಕೆ ಈ ಯೋಜನೆಗಳಿಂದ ಯಾವುದೇ ಪ್ರತಿಫಲ ದೊರೆಯದಂತಾಗಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ
