ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬೀತವಾಡದ ಯುವತಿಯೊಬ್ಬಳು ಮನೆಯಿಂದ ಯಾರಿಗೂ ಏನನ್ನೂ ಹೇಳದೆ ಹೊರಟು, ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ.
ನಾಪತ್ತೆಯಾದ ಯುವತಿಯನ್ನು ಸಾಕ್ಷಿ ಸೂರ್ಯಕಾಂತ್ ಚೊಡನಕರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಅಂಕೋಲಾ ಪಟ್ಟಣದ ‘ವೈಶ್ಯ ಟ್ರೇಡರ್ಸ್’ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ್ದ ಈಕೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ದಿನಾಂಕ 23-06-2026 ರಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ಗಂಟೆಯ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರಿಗೂ ಯಾವುದೇ ಮಾಹಿತಿ ನೀಡದೆ ಎಲ್ಲೋ ಹೋಗಿದ್ದು, ಈವರೆಗೂ ಮರಳಿ ಬಂದಿಲ್ಲ.

ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ, ಆತಂಕಗೊಂಡ ಯುವತಿಯ ತಾಯಿ ಸುಮಾ ಸೂರ್ಯಕಾಂತ ಚೊಡನಕರ್ ಅವರು ಜೂನ್ 25 ರಂದು ನೀಡಿದ ದೂರಿನನ್ವಯ, ಅಂಕೋಲಾ ಪೊಲೀಸರು ಕ್ರೈಂ ನಂಬರ್: 126/2026 ರಡಿ ‘ಮಹಿಳೆ ನಾಪತ್ತೆ’ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಚಹರೆ ಗುರುತು: ನಾಪತ್ತೆಯಾಗಿರುವ ಯುವತಿಯು 5 ಅಡಿ 3 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ದುಂಡನೆಯ ಮುಖ ಹಾಗೂ ಸದೃಢ ಮೈಕಟ್ಟು ಹೊಂದಿದ್ದಾಳೆ. ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುವ ಈಕೆ, ಮನೆಯಿಂದ ಹೋಗುವಾಗ ಸಿಲ್ವರ್ ಡಿಸೈನ್ ಇರುವ ಮರೂನ್ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ & ವೇಲ್ ಹಾಗೂ ಕುತ್ತಿಗೆಯಲ್ಲಿ ಬೆಳ್ಳಿ ಸರ ಧರಿಸಿದ್ದಳು. ಈಕೆಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಠಾಣೆಯ ದೂರವಾಣಿ ಸಂಖ್ಯೆ: (08388) 220333, ಮೊಬೈಲ್: 9480805250 / 9480805268 ಅಥವಾ ಇ-ಮೇಲ್: ankolakwr@ksp.gov.in ಗೆ ಸಂಪರ್ಕಿಸಬಹುದಾಗಿದೆ.


