ರಾಜ್ಯದ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿಳಂಬವಾಗಿ ಆಗಮಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಹಾಜರಾತಿ ದಾಖಲಿಸಲು ‘ಕರ್ತವ್ಯ’ (KARTAVYA – KAAMS) ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಜೂನ್ 4 ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆಯಲ್ಲಿ, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಹಾಗೂ ನೌಕರರು ಕಡ್ಡಾಯವಾಗಿ ‘ಕರ್ತವ್ಯ’ ಆ್ಯಪ್ ಅನ್ನು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು, ಪ್ರತಿದಿನ ಅದರಲ್ಲಿಯೇ ಹಾಜರಾತಿಯನ್ನು ದಾಖಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು.

ಆದರೆ, ಸರ್ಕಾರದ ಆದೇಶದ ಹೊರತಾಗಿಯೂ ರಾಜ್ಯದ ಲಕ್ಷಾಂತರ ನೌಕರರು ಈ ನಿಯಮವನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ. ಜೂನ್ 16ರ ಅಂಕಿ-ಅಂಶಗಳ ಪ್ರಕಾರ, ರಾಜ್ಯದಾದ್ಯಂತ ಬರೋಬ್ಬರಿ 2,13,925 ಅಧಿಕಾರಿಗಳು ಮತ್ತು ನೌಕರರು ಇನ್ನೂ ಕೂಡ ‘ಕರ್ತವ್ಯ’ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಗಳು ತಮ್ಮ ಟಿಪ್ಪಣಿಯಲ್ಲಿ ಬಹಿರಂಗಪಡಿಸಿದ್ದಾರೆ.
ಜಿಲ್ಲಾವಾರು ಗೈರುಹಾಜರಿ ಮತ್ತು ನೋಂದಣಿಯಾಗದ ಸಿಬ್ಬಂದಿಯ ಪಟ್ಟಿಯನ್ನು ಸಹ ಈ ಟಿಪ್ಪಣಿಯೊಂದಿಗೆ ಲಗತ್ತಿಸಿ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೃಹತ್ ಪ್ರಮಾಣದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇದೀಗ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೇರ ಹೊಣೆಗಾರಿಕೆ ನಿಗದಿಪಡಿಸಿದೆ.
ಆಯಾ ಜಿಲ್ಲೆಗಳಲ್ಲಿ ಇದುವರೆಗೂ ಆ್ಯಪ್‌ನಲ್ಲಿ ನೋಂದಾಯಿಸದ ಸಿಬ್ಬಂದಿಯನ್ನು ಕಡ್ಡಾಯವಾಗಿ ನೋಂದಾಯಿಸುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳ ವರದಿಯನ್ನು ಮುಂದಿನ 7 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಗಡುವು ವಿಧಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ಕಠಿಣ ನಡೆಯಿಂದಾಗಿ, ಕಚೇರಿ ಸಮಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದ ಸಿಬ್ಬಂದಿಗಳಿಗೆ ನಡುಕ ಶುರುವಾಗಿದೆ.


