ಅಂಕೋಲಾ: ತಾಲೂಕಿನ ಬೆಳಂಬರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ಸಾರ್ವಜನಿಕ ರಸ್ತೆಯನ್ನೇ ಜೂಜುಕೋರರು ತಮ್ಮ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾರ್ವಜನಿಕ ಬಾವಿಯ ಸಮೀಪ ಬೀದಿ ದೀಪದ ಬೆಳಕಿನಲ್ಲಿಯೇ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧರಿಸಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸೂ) ಶ್ರೀ ಗುರುನಾಥ ಹಾದಿಮನಿ ಅವರು ಸ್ವಯಂ ಪ್ರೇರಿತರಾಗಿ ಈ ಭರ್ಜರಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ.

ಜೂಜುಕೋರರು 200 ಹಾಗೂ 500 ರೂಪಾಯಿಗಳ ಹಣವನ್ನು ಪಣವಾಗಿಟ್ಟು ಆಟದಲ್ಲಿ ತಲ್ಲೀನರಾಗಿದ್ದರು. ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬೆಳಂಬರ ಗ್ರಾಮದ ನಿವಾಸಿಗಳಾದ ಸುಭಾಷ ವಿಷ್ಣು ಖಾರ್ವಿ (50), ರವಿ ತಿಮ್ಮಪ್ಪ ಗೌಡ (41), ಯೋಗೇಶ ಕುಸ್ಲು ಗೌಡ (35), ಸಂತೋಷ ಗಣಪತಿ ಖಾರ್ವಿ (39) ಹಾಗೂ ಹರ್ಷನ ಸುಧಾಕರ ಖಾರ್ವಿ (22) ಎಂಬ ಐವರನ್ನು ಪೊಲೀಸರು ಸುತ್ತುವರೆದು ಬಂಧಿಸಿದ್ದಾರೆ. ಇವರಲ್ಲಿ ಬಹುತೇಕರು ಮೀನುಗಾರಿಕೆ, ಆಟೋ ಚಾಲನೆ ಹಾಗೂ ಕೂಲಿ ಕೆಲಸ ಮಾಡುವವರಾಗಿದ್ದು, ಹಣದಾಸೆಗೆ ಬಿದ್ದು ಈ ಅಕ್ರಮದಲ್ಲಿ ಭಾಗಿಯಾಗಿದ್ದರು.
ಬಂಧಿತರಿಂದ ಇಸ್ಪೀಟ್ ಆಟಕ್ಕೆ ಬಳಸಿದ್ದ 12,340 ರೂ. ನಗದು, 52 ಇಸ್ಪೀಟ್ ಎಲೆಗಳು ಹಾಗೂ ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ಟಾರ್ಪಾಲಿನನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಆರೋಪಿಗಳ ಬಳಿಯಿದ್ದ ವಿವೋ, ಒಪ್ಪೋ, ರಿಯಲ್ ಮಿ ಮತ್ತು ಲಾವಾ ಕಂಪನಿಯ ಒಟ್ಟು ನಾಲ್ಕು ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟಾರೆ 23,340 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಸೆಕ್ಷನ್ 87 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಚುರುಕು ಗೊಳಿಸಲಾಗಿದೆ.


