ಅಂಕೋಲಾದ ಚನಗಾರ ಮಕ್ಕಳ ಶೈಕ್ಷಣಿಕ ಪರದಾಟಕ್ಕೆ ಮುಕ್ತಿ: ಶಾಲೆ ಉನ್ನತೀಕರಣಕ್ಕೆ ಶಾಸಕ ಸತೀಶ ಸೈಲ್ ತ್ವರಿತ ಸ್ಪಂದನೆ..!

News Desk
2 Min Read

ಅಂಕೋಲಾ ತಾಲೂಕಿನ ಚನಗಾರ ಗ್ರಾಮದ ವಿದ್ಯಾರ್ಥಿಗಳ ಸುದೀರ್ಘ ಕಾಲದ ಶೈಕ್ಷಣಿಕ ಬೇಡಿಕೆಯೊಂದು ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ. ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸುವಂತೆ ಕೋರಿ ಆಗಮಿಸಿದ ನಿಯೋಗದ ಮನವಿಗೆ ಶಾಸಕ ಸತೀಶ್ ಸೈಲ್ ಅವರು ತಕ್ಷಣವೇ ಸ್ಪಂದಿಸಿದ್ದು, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಸ್ಥಳದಿಂದಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಪೋಷಕರ ಆತಂಕಕ್ಕೆ ಪರಿಹಾರ: ಚನಗಾರ ಗ್ರಾಮದಲ್ಲಿರುವ ಶಾಲೆಯಲ್ಲಿ ಪ್ರಸ್ತುತ 1 ರಿಂದ 5ನೇ ತರಗತಿಯವರೆಗೆ ಮಾತ್ರ ಕಲಿಯಲು ಅವಕಾಶವಿತ್ತು. 6 ಮತ್ತು 7ನೇ ತರಗತಿ ವ್ಯಾಸಂಗ ಮಾಡಲು ಸ್ಥಳೀಯವಾಗಿ ಯಾವುದೇ ಶಾಲಾ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿಯೇ ಚಿಕ್ಕ ಮಕ್ಕಳು ಮುಂದಿನ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆದಾಡಬೇಕಾದ ಅನಿವಾರ್ಯತೆ ಇತ್ತು. ಇದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ತಕ್ಷಣವೇ ಮೇಲ್ದರ್ಜೆಗೇರಿಸ ಬೇಕೆಂಬುದು ಇಡೀ ಗ್ರಾಮಸ್ಥರ ಮತ್ತು ಪಾಲಕರ ಬಹುದಿನಗಳ ಕೂಗಾಗಿತ್ತು.

ನಿಯೋಗದಿಂದ ಮನವಿ ಸಲ್ಲಿಕೆ: ಈ ಜ್ವಲಂತ ಸಮಸ್ಯೆಗೆ ಮುಕ್ತಿ ಕಾಣುವ ಉದ್ದೇಶದಿಂದ ಗುರುವಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಎಂ. ಶೆಟ್ಟಿ ಅವರ ಮುಂದಾಳತ್ವದಲ್ಲಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರನ್ನೊಳಗೊಂಡ ನಿಯೋಗವು ಶಾಸಕ ಸತೀಶ್ ಸೈಲ್ ಅವರನ್ನು ಖುದ್ದಾಗಿ ಭೇಟಿಯಾಗಿ ಗ್ರಾಮದ ಶೈಕ್ಷಣಿಕ ಕೊರತೆ ಹಾಗೂ ಮಕ್ಕಳ ಪರದಾಟವನ್ನು ವಿವರಿಸಿದ ನಿಯೋಗ, ಶಾಲೆಯ ಉನ್ನತೀಕರಣಕ್ಕೆ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಿತು.

ಶಾಸಕರ ದಿಢೀರ್ ಕ್ರಮ: ನಿಯೋಗದ ಅಹವಾಲನ್ನು ಆಲಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕ ಸತೀಶ್ ಸೈಲ್ ಅವರು, ವಿಳಂಬ ಮಾಡದೆ ಸ್ಥಳದಿಂದಲೇ ಬೆಂಗಳೂರಿನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಶ್ಮಿ ಮೇಡಮ್ ಅವರಿಗೆ ದೂರವಾಣಿ ಕರೆ ಮಾಡಿದರು. “ಚನಗಾರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು, ತಕ್ಷಣವೇ ಜಾರಿಗೆ ಬರುವಂತೆ ಈ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಬೇಕು” ಎಂದು ಸೂಚನೆ ನೀಡಿದರು. ಜನಪ್ರತಿನಿಧಿಯ ಈ ತ್ವರಿತ ಮತ್ತು ಸಕಾರಾತ್ಮಕ ಸ್ಪಂದನೆಗೆ ಗ್ರಾಮಸ್ಥರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಜಿ.ಎಂ. ಶೆಟ್ಟಿ ಗ್ರಾಮದ ಪ್ರಮುಖರಾದನಂದಾ ಶಿರೋಡ್ಕರ್ ,ಶ್ರೀಲತಾ ಹೆಗಡೆ ,ರೇಖಾ ಆರ್. ಗೌಡ ,ಗಿರಿಜಾ ಎಂ. ಗೌಡ ,ಶಾಂತಿ ಎಂ. ಹಳ್ಳೇರ್ ,ದೇವಕಿ ಬಿ. ಹಳ್ಳೇರ್ ,ಪಾರ್ವತಿ ಆರ್. ಗೌಡ ,ಮಮತಾ ಆರ್. ಗೌಡಸೇರಿದಂತೆ ಅನೇಕ ಊರಿನ ಗಣ್ಯರು ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.

Share This Article
Leave a Comment