ಭಟ್ಕಳದಲ್ಲಿ ಕರುಳು ಹಿಂಡುವ ಜಲದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಸಾವು..

News Desk
1 Min Read

ಭಟ್ಕಳ (ಉತ್ತರ ಕನ್ನಡ): ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದವರು ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿರುವ ಅತ್ಯಂತ ಭೀಕರ ಜಲದುರಂತವೊಂದು ಭಟ್ಕಳ ತಾಲೂಕಿನ ಶಿರಾಲಿಯ ತಟ್ಟೆಹಕ್ಕಲು ನದಿಯಲ್ಲಿ ಭಾನುವಾರ ಸಂಭವಿಸಿದೆ. ಈ ಘೋರ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಇಡೀ ಶಿರಾಲಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಭಾನುವಾರದ ಕಾರಣ ತಂಡವೊಂದು ಕಪ್ಪೆಚಿಪ್ಪು ಸಂಗ್ರಹಿಸುವ ಉದ್ದೇಶದಿಂದ ಸಮೀಪದ ತಟ್ಟೆಹಕ್ಕಲು ನದಿ ತೀರಕ್ಕೆ ತೆರಳಿತ್ತು. ನದಿಯಲ್ಲಿ ದಿಢೀರನೆ ಎದುರಾದ ನೀರಿನ ರಭಸಕ್ಕೆ ಸಿಲುಕಿ 8 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ನದಿ ತೀರಕ್ಕೆ ದೌಡಾಯಿಸಿದ ಸ್ಥಳೀಯ ಮೀನುಗಾರರು, ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ. ನೀರಿನಿಂದ ಹೊರತೆಗೆಯಲಾದವರ ಪೈಕಿ ಕೆಲವರನ್ನು ರಕ್ಷಿಸಿ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ನೀರಿನಲ್ಲಿ ಕೊಚ್ಚಿಹೋಗಿರುವ ಇನ್ನುಳಿದವರಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಕಪ್ಪೆಚಿಪ್ಪು ತೆಗೆಯುವ ಆಸೆಗೆ ನೀರಿಗಿಳಿದ 8 ಮಂದಿ ಏಕಾಏಕಿ ಸಾವನ್ನಪ್ಪಿರುವುದು ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿದೆ. ದುರಂತದ ಸುದ್ದಿ ಕೇಳಿ ಆಸ್ಪತ್ರೆ ಹಾಗೂ ನದಿ ತೀರದ ಬಳಿ ಜಮಾಯಿಸಿರುವ ಆಪ್ತರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದ್ದು, ನೋಡುವವರ ಕರುಳು ಹಿಂಡುವಂತಿದೆ.

Share This Article
Leave a Comment