ಕಾರವಾರ: ಗುಜರಾತ್ನಿಂದ ಸತತ ಮೂರು ತಿಂಗಳುಗಳ ಕಾಲ ಸಾವಿರಾರು ಕಿಲೋಮೀಟರ್ ಕ್ರಮಿಸಿ ಬಂದಿದ್ದ ಬೃಹತ್ ವಾಹನವೊಂದು ತನ್ನ ಗಮ್ಯಸ್ಥಾನ ತಲುಪಲು ಕೇವಲ ಮೂರು ಕಿಲೋಮೀಟರ್ ಬಾಕಿ ಇರುವಾಗ ಉರುಳಿ ಬಿದ್ದ ಘಟನೆ ಕಾರವಾರ ತಾಲೂಕಿನ ಹರ್ಟುಗಾ ಗ್ರಾಮದ ಬಳಿ ಗುರುವಾರ ಜರುಗಿದೆ. ಈ ವಾಹನವು ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳಿಗೆ ಅಗತ್ಯವಿದ್ದ ಬೃಹತ್ ಯಂತ್ರೋಪಕರಣವನ್ನು ಹೊತ್ತು ತರುತ್ತಿತ್ತು.
ಕುತೂಹಲ ಮೂಡಿಸಿದ್ದ ಸುದೀರ್ಘ ಪಯಣ:
ಈ ಬೃಹತ್ ಯಂತ್ರದ ಸಾಗಾಟ ಸ್ಥಳೀಯರ ಪಾಲಿಗೆ ಒಂದು ಅಚ್ಚರಿಯ ವಿಷಯವಾಗಿತ್ತು. ಕಳೆದ ಫೆಬ್ರವರಿ ತಿಂಗಳಿನಲ್ಲಿ ಗುಜರಾತ್ನಿಂದ ಪ್ರಯಾಣ ಬೆಳೆಸಿದ್ದ ಈ ವಾಹನ, ಏಪ್ರಿಲ್ 15ರಂದು ಕಾರವಾರ ಗಡಿ ಪ್ರವೇಶಿಸಿತ್ತು. ಯಂತ್ರದ ಅಗಾಧ ತೂಕ ಹಾಗೂ ಗಾತ್ರದ ಕಾರಣ ವಾಹನವನ್ನು ಅತ್ಯಂತ ಎಚ್ಚರಿಕೆಯಿಂದ, ಆಮೆಗತಿಯಲ್ಲಿ ಚಲಾಯಿಸಲಾಗುತ್ತಿತ್ತು. ಕಾರವಾರದಿಂದ ಕೈಗಾ ಮಾರ್ಗದತ್ತ ಕಳೆದ 20 ದಿನಗಳಿಂದ ಇಂಚಿಂಚಾಗಿ ಸಾಗುತ್ತಿದ್ದ ಈ ವಾಹನದ ನಡಿಗೆಯನ್ನು ಸಾರ್ವಜನಿಕರು ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಅಂತಿಮ ಘಟ್ಟದಲ್ಲಿ ಕೈಕೊಟ್ಟ ಅದೃಷ್ಟ: ಸಾವಿರಾರು ಕಿಲೋಮೀಟರ್ಗಳ ಕಠಿಣ ಹಾಗೂ ಶ್ರಮದಾಯಕ ಪಯಣ ಮುಗಿಸಿ ಇನ್ನೇನು ಗುರಿ ಮುಟ್ಟಿತು ಎನ್ನುವಷ್ಟರಲ್ಲಿ ಈ ಅವಘಡ ಸಂಭವಿಸಿದೆ. ಕೈಗಾ ಸ್ಥಾವರಕ್ಕೆ ತೀರಾ ಸಮೀಪದಲ್ಲಿರುವ ಹರ್ಟುಗಾ ಗ್ರಾಮದ ಬಳಿಯ ತಿರುವಿನಲ್ಲಿ ಸಾಗುವಾಗ ವಾಹನವು ತನ್ನ ಸಮತೋಲನ ಕಳೆದುಕೊಂಡಿದೆ. ಯಂತ್ರದ ಭಾರಿ ಭಾರದ ಪರಿಣಾಮ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಂಚಿಗೆ ವಾಲಿಕೊಂಡು ಪಲ್ಟಿಯಾಗಿದೆ.
✍️. ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

