ಅಂಕೋಲಾದಲ್ಲಿ ಜನವರಿ 23ರಂದು ಮೂರನೇ ವರ್ಷದ ಹಿಂದೂ ಉತ್ಸವ— ಪೋಸ್ಟರ್ ಅನಾವರಣ; ಹಿಂದೂ ಒಗ್ಗಟ್ಟಿನ ಕರೆ..

News Desk
2 Min Read

ಅಂಕೋಲಾ ತಾಲೂಕಿನಲ್ಲಿ ಜನವರಿ 23ರಂದು ನಡೆಯಲಿರುವ ಮೂರನೇ ವರ್ಷದ ಹಿಂದೂ ಉತ್ಸವದ ಪೋಸ್ಟರ್ ಅನ್ನು ದಿನಾಂಕ 21-12-2026ರಂದು ಹಿಂದೂ ಉತ್ಸವ ಸಮಿತಿಯ ವತಿಯಿಂದ ಶಾಂತದುರ್ಗ ದೇವಿಯ ಬಂಡಿಕಟ್ಟೆ ಹತ್ತಿರ ಅನಾವರಣಗೊಳಿಸಲಾಯಿತು. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಜಾತಿಗಳನ್ನು ಪ್ರತಿನಿಧಿಸುವ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಹಿಂದೂ ಉತ್ಸವಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿಂದೂ ಉತ್ಸವ ಸಮಿತಿಯ ಪ್ರಮುಖರಾದ ಸುನಿಲ ನಾಯ್ಕ ಹೊನ್ನಿಕೇರಿ, “ಎಲ್ಲಾ ದೇವರಿಗೆ ನಮಸ್ಕರಿಸುತ್ತಾ ಅಂಕೋಲಾದ ಸಮಸ್ತ ಹಿಂದೂ ಬಾಂಧವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಅಂಕೋಲಾದ ಹಿಂದೂ ಬಾಂಧವರ ಆಶೀರ್ವಾದದಿಂದ ಈ ವರ್ಷ ಸತತವಾಗಿ ಮೂರನೇ ವರ್ಷದ ಹಿಂದೂ ಉತ್ಸವವನ್ನು ಜನವರಿ 23ರಂದು ಆಚರಿಸಲಾಗುತ್ತಿದೆ. ಅಂಕೋಲಾದಲ್ಲಿ ವಾಸಿಸುವ ಪ್ರತಿಯೊಂದು ಜಾತಿ ವ್ಯವಸ್ಥೆಯೊಳಗಿನ ಸಮಾಜದ ಬಾಂಧವರು ಈ ಹಿಂದೂ ಉತ್ಸವಕ್ಕೆ ಸಹಕಾರ ನೀಡಿದ್ದಾರೆ,” ಎಂದು ತಿಳಿಸಿದರು.

ಹಿಂದೂ ಉತ್ಸವಕ್ಕೆ ಬೆಂಬಲ ನೀಡಿ ಸಹಕರಿಸಿದ ಎಲ್ಲಾ ಜಾತಿ–ಪಂಗಡಗಳ ಹಿಂದೂ ಬಾಂಧವರಿಗೆ ಹಾಗೂ ಸಮಾಜದ ಪ್ರಮುಖರಿಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು, “ಈ ಹಿಂದೂ ಉತ್ಸವವು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಥವಾ ವೈಯಕ್ತಿಕ ಪ್ರತಿಷ್ಠೆಗಾಗಿ ನಡೆಸುವ ಕಾರ್ಯಕ್ರಮವಲ್ಲ. ಹಿಂದೂಗಳು ಒಂದಾಗಿ ಕೂಡಿ, ಅವರ ಶಕ್ತಿಯನ್ನು ಒಗ್ಗೂಡಿಸಿ, ಹಿಂದೂ ಸಮಾಜವನ್ನು ಗಟ್ಟಿಗೊಳಿಸುವುದೇ ಈ ಉತ್ಸವದ ಏಕೈಕ ಉದ್ದೇಶ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬ್ಯಾನರ್‌ಗಳ ಬಗ್ಗೆ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಹಿಂದೂ ಉತ್ಸವ ಸಮಿತಿಯ ವತಿಯಿಂದ ಯಾವುದೇ ವ್ಯಕ್ತಿಗತ ಬ್ಯಾನರ್‌ಗಳನ್ನು ಹಾಕಿಲ್ಲ. ಹಿಂದೂ ಉತ್ಸವಕ್ಕೆ ಶುಭಾಶಯ ಕೋರಲು ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಬ್ಯಾನರ್‌ಗಳನ್ನು ಹಾಕಿರಬಹುದು. ಸಮಿತಿಯ ಮೂಲಕ ಯಾವುದೇ ವ್ಯಕ್ತಿಗತ ಬ್ಯಾನರ್‌ಗಳನ್ನು ಹಾಕಲಾಗಿಲ್ಲ,” ಎಂದು ಹೇಳಿದರು.

“ಹಿಂದೂ ಸಮಾಜವನ್ನು ಗಟ್ಟಿಗೊಳಿಸುವುದೇ ನಮ್ಮ ಮುಖ್ಯ ಗುರಿ. ಹೀಗಾಗಿ ಹಿಂದಿನಿಂದ ಟೀಕೆ ಮಾಡುವ ಬದಲು ನಮ್ಮೊಂದಿಗೆ ಕೈಜೋಡಿಸಿ. ಮಾತನಾಡುವ ಹಕ್ಕು ಎಲ್ಲರಿಗೂ ಇದೆ, ಆದರೆ ನಮ್ಮ ಜೊತೆಗೆ ಬಂದರೆ ಇನ್ನೂ ಹೆಚ್ಚಿನ ಅವಕಾಶಗಳು ನಿಮಗೂ ಸಿಗುತ್ತವೆ,” ಎಂದು ಮನವಿ ಮಾಡಿದರು. ಉತ್ಸವದ ಬಗ್ಗೆ ತಪ್ಪು ಸಂದೇಶಗಳನ್ನು ಹರಡುವವರ ಕುರಿತು ಉಲ್ಲೇಖಿಸಿದ ಅವರು, “ಅಂತಹ ಕಾರ್ಯಗಳಿಗೆ ಮುಂದೊಂದು ದಿನ ದೇವರೇ ತಕ್ಕ ಪಾಠ ಕಲಿಸುತ್ತಾನೆ,” ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, “ಅಂತಹ ದಬ್ಬಾಳಿಕೆಗಳು ನಡೆಯಬಾರದೆಂಬ ದೃಷ್ಟಿಯಿಂದ ಹಿಂದೂ ಉತ್ಸವದ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದೇವೆ. ಹಿಂದೂಗಳಲ್ಲಿಯೂ ತಾಕತ್ತು ಇದೆ, ಗಟ್ಟಿತನವಿದೆ. ಆದರೂ ನಾವು ಶಾಂತಿಪ್ರಿಯರು; ‘ಸರ್ವೇ ಜನ ಸುಖಿನೋ ಭವಂತು’ ಎನ್ನುವ ತತ್ವವನ್ನು ನಂಬುವವರು. ಸಹನಶೀಲತೆಯಿಂದ ಸಮಾಜವನ್ನು ಒಗ್ಗೂಡಿಸಿಕೊಂಡು ಈ ಹಿಂದೂ ಉತ್ಸವವನ್ನು ಆಚರಿಸುತ್ತಿದ್ದೇವೆ,” ಎಂದು ಹೇಳಿದರು. ಕೊನೆಯಲ್ಲಿ ಅವರು, “ಜನವರಿ 23ರಂದು ನಡೆಯುವ ಹಿಂದೂ ಉತ್ಸವದಲ್ಲಿ ಸಮಸ್ತ ಹಿಂದೂ ಬಾಂಧವರು ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು,” ಎಂದು ಕೋರಿದರು.

Share This Article