ಅಂಕೋಲಾ :ತಾಲೂಕಿನ ಹಟ್ಟಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಮಾತೋಶ್ರೀ ಗಾಯತ್ರಿ ಸೇವಾ ಸಂಸ್ಥೆ ವತಿಯಿಂದ ಪ್ರೊಜೆಕ್ಟರ್ ವ್ಯವಸ್ಥೆಯನ್ನು ಒದಗಿಸಿ ‘ಇ-ಕಲಿಕಾ’ ಕೊಠಡಿಯನ್ನು ಉದ್ಘಾಟಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಜತ್ ಭಟ್ ಅವರು ಪ್ರೊಜೆಕ್ಟರ್ ಅನ್ನು ಸ್ಕ್ರೀನ್ ಮೇಲೆ ಚಾಲನೆ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳು ಮನೆಗಳಲ್ಲಿ ಮೊಬೈಲ್ ವೀಕ್ಷಣೆ ಮಾಡುವ ಅವಶ್ಯಕತೆ ಇಲ್ಲದೆ, ಶಾಲೆಯಲ್ಲಿಯೇ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರೊಜೆಕ್ಟರ್ ಮೂಲಕ ಪಾಠಗಳನ್ನು ಕಲಿಯಬೇಕು. ಇದರಿಂದ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ” ಎಂದು ಹೇಳಿದರು.

ಸಂಸ್ಥೆಯ ಮೇಲ್ವಿಚಾರಕರಾದ ಶ್ರೀ ವಸಂತ್ ಗೌಡ ಮಾತನಾಡಿ, “ಅಧ್ಯಕ್ಷರಾದ ಶ್ರೀ ರಜತ್ ಭಟ್ ಸರ್ ಅವರು ತಾವು ಹೇಗೆ ಉನ್ನತ ಮಟ್ಟಕ್ಕೆ ಬೆಳೆದರೋ ಹಾಗೆಯೇ ಕನ್ನಡ ಶಾಲೆಯ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಬೆಳೆಯಬೇಕು ಎಂಬ ಆಶಯ ಹೊಂದಿದ್ದಾರೆ. ಇದು ನಮಗೆ ಸಂತೋಷದ ವಿಷಯ” ಎಂದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಶ್ರೀ ಸೋಮೇಶ್ವರ ಗೌಡ ಹಾಗೂ ಸಂಸ್ಥೆಯ ಮ್ಯಾನೇಜರ್ ಅಭಿಷೇಕ್ ಶುಭ ಹಾರೈಸಿದರು. SDMC ಅಧ್ಯಕ್ಷ ದಿಲೀಪ ಜೆ. ನಾಯ್ಕ ಮಾತನಾಡಿ, “ಈ ಶಾಲೆಯ ಮಕ್ಕಳ ಪಾಲಕರಿಗೆ ಇದು ಅತ್ಯಂತ ಸಂತಸದ ವಿಚಾರ. ಮಕ್ಕಳು ಮನೆಗೆ ಹೋಗಿ ಮೊಬೈಲ್ ಬಳಸುವ ಬದಲು, ಈಗ ಶಾಲೆಯಲ್ಲಿಯೇ ಶಿಕ್ಷಕರಿಂದ ಪ್ರೊಜೆಕ್ಟರ್ ಮೂಲಕ ಕಲಿಕೆ ನಡೆಸಲು ಅವಕಾಶ ಕಲ್ಪಿಸಿರುವ ಶ್ರೀ ಮಾತೋಶ್ರೀ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಜತ್ ಭಟ್ ಸರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಸ್ಥೆಯು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ” ಎಂದು ಹಾರೈಸಿದರು.
SDMC ಉಪಾಧ್ಯಕ್ಷೆ ನೂರ್ ಜಹಾನ್ ದೇಸಾಯಿ, SDMC ಸದಸ್ಯ ಲಂಬೋದರ ನಾಯ್ಕ, ವಿದ್ಯಾರ್ಥಿಗಳು, ಪಾಲಕರು, ಬಿ.ಎಡ್. ತರಬೇತಿ ವಿದ್ಯಾರ್ಥಿಗಳಾದ ನವೀನ ಆಗೇರ್, ಕೀರ್ತಿ ಗೌಡ, ಸ್ಪೂರ್ತಿ ಗೌಡ, ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿಯರಾದ ಶ್ರೀಮತಿ ಅಕ್ಷತಾ ರಾಮನಾಥನ್ ಅವರು ನಿರ್ವಹಿಸಿದರು. ಪ್ರಭಾರಿ ಮುಖ್ಯಾಧ್ಯಾಪಕರಾದ ಶ್ರೀಮತಿ ಭಾರತಿ ಬಿ. ನಾಯಕ್ ಸ್ವಾಗತಿಸಿದರು. ಅತಿಥಿ ಶಿಕ್ಷಕಿಯಾದ ಕುಮಾರಿ ಭಾಗ್ಯಶ್ರೀ ಆರ್. ನಾಯ್ಕ ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವರದಿ : ಕಿರಣ ಗಾಂವಕರ

