ಬೆಲೆಕೇರಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ: ಅಶಾಂತಿ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಗಡಿಪಾರು ಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷರಿಂದ ತಹಶೀಲ್ದಾರರಿಗೆ ಮನವಿ..

News Desk
1 Min Read

ಅಂಕೋಲಾ ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.ಈ ಸಂಬಂಧ ಸುರಜ ಗುರುದಾಸ ಬಾನಾವಳಿಕರ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಪಿ.ಎಮ್.ಶ್ರೀ ಎಮ್.ಎಚ್.ಪಿ.ಎಸ್ ಶಾಲೆ ಖಾರ್ವಿವಾಡ, ಬೇಲೆಕೇರಿ ಅವರು ಅಂಕೋಲಾ ತಹಶೀಲ್ದಾರರ ಕಚೇರಿಗೆ ದಿನಾಂಕ12-1-2026ರಂದು ಲಿಖಿತ ದೂರು ಸಲ್ಲಿಸಿದ್ದಾರೆ.

ದೂರು ಪತ್ರದಲ್ಲಿ, ಬೇಲೆಕೇರಿ ಗ್ರಾಮದ ಒಬ್ಬ ಅಶಾಂತಿ ಸೃಷ್ಟಿಸುವ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಗುಂಡಾಗಿರಿ ನಡೆಸುತ್ತಿದ್ದು, ಗಣ್ಯ ವ್ಯಕ್ತಿಗಳ ಮೇಲೆ ಪದೇಪದೇ ಹಲ್ಲೆ ಮಾಡುತ್ತಿರುವ ಆರೋಪಗಳನ್ನು ಉಲ್ಲೇಖಿಸಲಾಗಿದೆ. ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿರುವುದರ ಜೊತೆಗೆ, ನ್ಯಾಯಾಲಯದಲ್ಲಿಯೂ ಪ್ರಕರಣಗಳು ಬಾಕಿ ಇರುವುದಾಗಿ ಹೇಳಲಾಗಿದೆ.

ಇದಲ್ಲದೆ, ಸಂಬಂಧಿತ ವ್ಯಕ್ತಿಯ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) 126 ಅಡಿಯಲ್ಲಿ ಪ್ರಕರಣ ಅಂಕೋಲಾ ತಹಶೀಲ್ದಾರರ ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂಬ ಅಂಶವನ್ನೂ ದೂರು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಡಿಸೆಂಬರ್ 2025ರಲ್ಲಿ ಸ್ಥಳೀಯ ಬೋಟ್ ಯುನಿಯನ್‌ಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಯ ಮನೆಗೆ ರಾತ್ರಿ ವೇಳೆ ನುಗ್ಗಿ ಹಲ್ಲೆ ನಡೆಸಿದ ಘಟನೆಯ ನಂತರ, ಇದನ್ನು ಖಂಡಿಸಿ ಬೋಟ್ ಯುನಿಯನ್ ಸದಸ್ಯರು ಒಂದು ದಿನ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ವಿಚಾರವೂ ದೂರು ಪತ್ರದಲ್ಲಿದೆ.

ಇದಲ್ಲದೆ, ಇತರರ ಮನೆಗಳಿಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿದ ಆರೋಪಗಳನ್ನೂ ಉಲ್ಲೇಖಿಸಿ, ಗ್ರಾಮದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸಂಬಂಧಿಸಿದ ಅಶಾಂತಿ ಕಾರಕನನ್ನು ಬೇಲೆಕೇರಿ ಗ್ರಾಮದಿಂದ ಗಡಿಪಾರು ಮಾಡಬೇಕು ಹಾಗೂ ಅವನಿಗೆ ಬೆಂಬಲ ನೀಡುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಭದ್ರತೆ ಕಾಪಾಡುವ ದೃಷ್ಟಿಯಿಂದ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ದೂರು ಪತ್ರದಲ್ಲಿ ವ್ಯಕ್ತವಾಗಿದೆ. ಈ ದೂರು ಪ್ರತಿಯನ್ನು ರಾಜ್ಯದ ಗೃಹ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹ ರವಾನಿಸಲಾಗಿದೆ.

Share This Article