ಅಂಕೋಲಾ: ಮೂಲತಃ ಸೆಂಟ್ರಿಂಗ್ ಕೆಲಸಗಾರರಾಗಿದ್ದ ಇವರು, ಈ ಕೆಲಸವಿಲ್ಲದ ಸಮಯದಲ್ಲಿ ಜೀವನ ನಿರ್ವಹಣೆಗಾಗಿ ತೆಂಗಿನ ಮರ ಹತ್ತುವ ಕಾಯಕ ಮಾಡುತ್ತಿದ್ದರು. ಎಂದಿನಂತೆ ಮರವೇರಿದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಜು ಗೌಡ ಮೃತ ದುರ್ದೈವಿಯಾಗಿದ್ದು, ದುಡಿದುಣ್ಣುವ ಜೀವವೊಂದು ಅಕಾಲಿಕವಾಗಿ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.
ರಾಜು ಗೌಡ ಅವರು ಸೆಂಟ್ರಿಂಗ್ ಕೆಲಸ ಇಲ್ಲದ್ದ ಕಾರಣ ತೆಂಗಿನ ಮರ ಹತ್ತುವ ಕಾಯಕದಲ್ಲಿ ತೊಡಗಿಕೊಂಡಿದ್ದರು ಹಾಗೂ ತಾವೇ ದುಡಿದು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಎಂದಿನಂತೆ ಅವರು ಕಸಬಿನಂತೆ ತೆಂಗಿನ ಮರವೇರಿದ ಸಂದರ್ಭದಲ್ಲಿ, ವಿದ್ಯುತ್ ತಂತಿ ಅಚಾನಕ್ ಆಗಿ ಸ್ಪರ್ಶಿಸಿದೆ ಎನ್ನಲಾಗಿದೆ. ವಿದ್ಯುತ್ ಶಾಕ್ ತಗುಲಿದ ಪರಿಣಾಮ ರಾಜು ಗೌಡ ಅವರು ಮರದ ಮೇಲೆಯೇ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ರಾಜು ಗೌಡ ಅವರು ಊರಿನಲ್ಲಿ ಪ್ರತಿಯೊಬ್ಬರೊಂದಿಗೂ ಬೆರೆಯುವ ಸ್ನೇಹಜೀವಿಯಾಗಿದ್ದರು. ಮನೆಯ ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಠಾತ್ ನಡೆದ ಈ ಘಟನೆಯಿಂದ ಮೃತರ ಸ್ನೇಹಿತರ ಬಳಗ ಹಾಗೂ ಗ್ರಾಮಸ್ಥರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಮುಂದಿನ ಕಾನೂನು ಕ್ರಮಗಳು ಜರುಗುತ್ತಿವೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

