ಅಂಕೋಲ:ಸ್ವಾಮಿ ವಿವೇಕಾನಂದರು ನಮ್ಮ ದೇಶದ ಅಮೂಲ್ಯ ಆಸ್ತಿಯಾಗಿದ್ದು, ದೇಶದ ಯುವಜನರೇ ನಿಜವಾದ ಸಂಪತ್ತು ಎಂದು ಅವರು ನಂಬಿದ್ದರು. ಯುವಜನರಲ್ಲಿ ದೇಶವನ್ನು ಬದಲಾಯಿಸುವ ಶಕ್ತಿ ಇದೆ. ಪ್ರತಿಯೊಬ್ಬರೂ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರಿಂದ ಸ್ವಾಮಿ ವಿವೇಕಾನಂದರು ಚಿರಸ್ಥಾಯಿಯಾಗಿದ್ದಾರೆ ಎಂದು ಪ್ರಶಿಕ್ಷಣಾರ್ಥಿ ಅಕ್ಷತಾ ನಾಯ್ಕ ಹೇಳಿದರು.ಅವರು ಸ್ಥಳೀಯ ಕೆಎಲ್ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳೇ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಶಿಕ್ಷಣಾರ್ಥಿ ಪ್ರೀತಿ ಬಾನಾವಳಿಕರ ಅವರು, ಸ್ವಾಮಿ ವಿವೇಕಾನಂದರ ಸ್ಮರಣಾರ್ಥವಾಗಿ ಆಚರಿಸುವ ಯುವ ದಿನಾಚರಣೆ ನಮಗೆಲ್ಲ ಆದರ್ಶವಾಗಬೇಕು. ಈ ದೇಶ ಯುವಕರದ್ದಾಗಿದ್ದು, ಅದನ್ನು ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಆದ್ದರಿಂದ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಕ್ಷಿತಾ ಅಂಬಿಗ ಹಾಗೂ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಕುಮಾರ ಸಿಮ್ರನ್ ಸೈಯದ್ ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಶಿಕ್ಷಣಾರ್ಥಿಗಳಾದ ಪ್ರವೀಣ ಗಾವ್ಕರ, ಸಂತೋಷ ಪೂಜಾರಿ ಉಪಸ್ಥಿತರಿದ್ದರು. ಕುಮಾರ ವಿಜಯ್ ಕುಮಾರ ವಂದಿಸಿದರು. ಕುಮಾರಿ ಇಳಾ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

