ಅಂಕೋಲಾ: ಪಡ್ತೀ ಸಮಾಜದ ಕ್ರಿಕೆಟ್ ಟೂರ್ನಮೆಂಟ್ 2026 – ಸೀಸನ್ 1ರ ಉದ್ಘಾಟನಾ ಸಮಾರಂಭವು ಬಾಸಗೋಡದ ನಡುಮೇಣ ಮೈದಾನದಲ್ಲಿ ಇಂದು ದಿನಾಂಕ :11/01/2025 ರಂದು ಭವ್ಯವಾಗಿ ನಡೆಯಿತು.
ಸಮಾಜದ ವಿವಿಧ ಭಾಗಗಳಲ್ಲಿ ಚದುರಿಕೊಂಡಿರುವ ಪಡ್ತಿ ಸಮಾಜದ ಯುವಕರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡಾಕೂಟಕ್ಕೆ ಸಮಾಜದ ಹಿರಿಯರು, ಯುವಕರು ಹಾಗೂ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಕ್ರೀಡಾಕೂಟವು ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತವಾಗದೆ, ಯುವಕರಲ್ಲಿ ಏಕತೆ, ಸ್ನೇಹಭಾವ ಹಾಗೂ ಸಮಾಜಮುಖಿ ಜವಾಬ್ದಾರಿಯ ಅರಿವು ಮೂಡಿಸುವ ಆಶಯವನ್ನು ಹೊಂದಿದೆ.

ಕ್ರೀಡೆಯ ಜೊತೆ ಸಮಾಜಸೇವೆ ಅಗತ್ಯ – ಗೋಪಾಲಕೃಷ್ಣ ನಾಯಕ..
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದಗೋಪಾಲಕೃಷ್ಣ ನಾಯಕ,ಪಡ್ತೀ ಸಮಾಜದ ಕ್ರಿಕೆಟ್ ಟೂರ್ನಮೆಂಟ್ ಕೇವಲ ಕ್ರೀಡಾಕೂಟವಲ್ಲ, ಸಮಾಜದ ವಿವಿಧ ಭಾಗಗಳಲ್ಲಿ ಚದುರಿಕೊಂಡಿರುವ ಯುವಶಕ್ತಿಯನ್ನು ಒಂದೆಡೆ ಸೇರಿಸುವ ಮಹತ್ವದ ವೇದಿಕೆ ಎಂದು ಹೇಳಿದರು.
ಸಮಾಜದ ಮೂಲೆಮೂಲೆಗಳಲ್ಲಿ “ಎಲೆ ಮರಿ ಕಾಯಿಯಂತೆ” ಅಡಗಿರುವ ಕ್ರಿಕೆಟ್ ಪ್ರತಿಭೆಗಳಿಗೆ ಇಂತಹ ಕ್ರೀಡಾಕೂಟಗಳು ವೇದಿಕೆ ಒದಗಿಸುತ್ತವೆ. ಇದರಿಂದ ಯುವಕರಲ್ಲಿ ಆತ್ಮೀಯತೆ, ಪ್ರೀತಿ ಮತ್ತು ವಿಶ್ವಾಸ ಬೆಳೆದು ಸಮಾಜದ ಬಾಂಧವ್ಯ ಗಟ್ಟಿಯಾಗುತ್ತದೆ ಎಂದರು. ಕ್ರೀಡೆಯ ಜೊತೆಗೆ ಯುವಕರು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವೃದ್ಧರು ಮತ್ತು ಬಡವರು ಸರ್ಕಾರದ ಗ್ಯಾರಂಟಿ ಯೋಜನೆಗಳು, ವಿಧವಾ ವೇತನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾಗಿದ್ದಾರೆ. ದಾಖಲೆಗಳ ಕೊರತೆಯಿಂದ ಅರ್ಹರಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಈ ಕೆಲಸವನ್ನು ಕೇವಲ ಪಂಚಾಯತ್‌ಗಳೇ ಮಾಡಲಿ ಎಂದು ಕಾಯದೆ, ಯುವಕರು ತಾವೇ ಮುಂದಾಗಿ ಸಹಾಯ ಮಾಡಬೇಕು. ಅಂಥ ಸೇವೆಯೇ ನಿಜವಾದ ಪುಣ್ಯದ ಕೆಲಸ ಎಂದು ಅವರು ಹೇಳಿದರು.
ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡುವುದಕ್ಕಿಂತ ದೊಡ್ಡ ಗಿಫ್ಟ್ ಯಾವುದೂ ಇಲ್ಲ. ಅನಾರೋಗ್ಯ ಪೀಡಿತರ ವಿಷಯವನ್ನು ಸಾರ್ವಜನಿಕ ಪ್ರದರ್ಶನ ಮಾಡಬಾರದು ಎಂಬ ಸಂದೇಶ ನೀಡಿದ ಅವರು, ಪಡ್ತೀ ಸಮಾಜ ಈ ಕ್ರೀಡಾಕೂಟದ ಮೂಲಕ ಮುಖ್ಯವಾಹಿನಿಗೆ ಬರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮಾತನಾಡಿದ ಜಗದೀಶ್ ಖಾರ್ವಿ ಅವರು, ಪಡ್ತೀ ಸಮಾಜವು ಹಳೆಯ ಕಾಲದಿಂದಲೇ ಕ್ರಿಕೆಟ್‌ಗೆ ಮಹತ್ವ ನೀಡುತ್ತ ಬಂದಿದೆ. ಬಾಲ್ಯದ ದಿನಗಳಲ್ಲಿ ಸೈಕಲ್ ಮೇಲೆ ಬಂದು ಕ್ರೀಡಾಕೂಟ ನೋಡುತ್ತಿದ್ದ ದಿನಗಳು ನೆನಪಾದವು ಎಂದರು. ಅಷ್ಟೇ ಅಲ್ಲದೇ ವೇದಿಕೆಯಲ್ಲಿದ್ದ ಗೋಪಾಲಕೃಷ್ಣ ನಾಯಕರು ಯುವಕರ ಹೃದಯದಲ್ಲಿ ನೆಲೆಸಿರುವ ನಾಯಕರು. ಅನೇಕ ಬಡವರಿಗೆ ಮೌನವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ನಾಗರಾಜ ಕೆ. ಗಾಂವಕರ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢನಾಗುತ್ತಾನೆ. ಯುವಕರ ದುಶ್ಚಟಗಳಿಗೆ ದಾಸರಾಗದೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಕಾಸ ವಾಹಿನಿ ವರದಿಗಾರರಾದ ಕಿರಣ್ ಗಾಂವಕರ ಮಾತನಾಡಿ, ವೇದಿಕೆಯ ಮೇಲಿರುವ ಎಲ್ಲಾ ಗಣ್ಯರಿಗೆ ಸ್ವಾಗತ ಕೋರಿದರು. ಪಡ್ತೀ ಸಮಾಜದ ಹಿರಿಯರು, ಯುವಕರು ಹಾಗೂ ಕ್ರೀಡಾಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿ, ಟೂರ್ನಮೆಂಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೇಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಿದರ್ ನಾಯಕ್ ಮಾತನಾಡಿ, ಬಡವರ ಮೇಲಿನ ಗೋಪಾಲಕೃಷ್ಣ ನಾಯಕರ ಕಾಳಜಿ ಸಂತಸ ತಂದಿದೆ ಎಂದರು. ಜನರು ಆರಿಸಿ ಕಳಿಸಿದ ಪ್ರತಿನಿಧಿಗಳು ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆ ನೋಡಬೇಕು. ಪಡ್ತೀ ಸಮಾಜದ ಕ್ರೀಡೆಯೂ ದೀರ್ಘಕಾಲ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಕ್ರೀಡಾಂಗಣ ಉದ್ಘಾಟನೆನಂತರ ಮೈದಾನಕ್ಕೆ ತೆರಳಿ ಕ್ರೀಡಾಂಗಣದ ಉದ್ಘಾಟನೆ ನಡೆಸಲಾಯಿತು. ಭಾಗವಹಿಸಿದ ಎರಡು ತಂಡಗಳಿಗೆ ಶುಭಾಶಯ ಕೋರಲಾಗಿದ್ದು, ಪಂದ್ಯಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಪಡ್ತೀ ಸಮಾಜದ ಕ್ರಿಕೆಟ್ ಟೂರ್ನಮೆಂಟ್ ಯೂಟ್ಯೂಬ್ ಮೂಲಕ ಲೈವ್ ಪ್ರಸಾರವಾಗುತ್ತಿದ್ದು, ದಿನಾಂಕ 11/01/2026 ಹಾಗೂ 18/01/2026ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ. ಸಮಾರೋಪ ಸಮಾರಂಭಕ್ಕೆ ಕಾರವಾರ ಮತ್ತು ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ವರದಿ: ಕಿರಣ ಗಾಂವಕರ

