ಅಂಕೋಲಾ ತಾಲೂಕಿನ ಹಿಂದೂ ಉತ್ಸವ ಸಮಿತಿಯಿಂದ ಮೂರನೇ ವರ್ಷದ ಹಿಂದೂ ಉತ್ಸವವನ್ನು ಜನವರಿ 23ರಂದು ಆಯೋಜಿಸಲು ನಿನ್ನೆ ದಿನಾಂಕ2/1/2026 ರಂದು ಗುರುಪ್ರಸಾದ ಹೋಟೆಲಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಉತ್ಸವ ಸಮಿತಿಯ ಪ್ರಮುಖ ಮುಖಂಡ ಸುನಿಲ್ ನಾಯ್ಕ (ಹೊನ್ನಿಕೇರಿ), “ಅಂಕೋಲಾದಲ್ಲಿ ಕೆಲವೇ ಸೀಮಿತ ಜಾತಿಗಳಿಂದ ಉತ್ಸವಗಳು ನಡೆಯುತ್ತಿವೆ. ಆದರೆ ನಮ್ಮ ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ. ಆ ಎಲ್ಲ ಜಾತಿಗಳಲ್ಲಿರುವ ನಮ್ಮ ಹಿಂದೂ ಬಾಂಧವರನ್ನು ಒಗ್ಗೂಡಿಸಿ ‘ಹಿಂದೂ’ ಎನ್ನುವ ಮನೋಭಾವನೆ ಬೆಳೆಸಿಕೊಳ್ಳುವ ಉದ್ದೇಶದಿಂದಲೇ ಈ ಹಿಂದೂ ಉತ್ಸವವನ್ನು ಆರಂಭಿಸಿದ್ದೇವೆ. ಇದು ಯಾವುದೇ ರಾಜಕೀಯ ಲಾಭಕ್ಕಾಗಿ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ನಡೆಸುವ ಕಾರ್ಯಕ್ರಮವಲ್ಲ. ನಮ್ಮ ಧರ್ಮದ ಅಡಿಯಲ್ಲಿ ಬರುವ ಪ್ರತಿಯೊಂದು ಕುಟುಂಬವೂ ಜೊತೆಗೂಡಿ, ಹಿಂದೂ ಉತ್ಸವದಲ್ಲಿ ಪಾಲ್ಗೊಂಡು ಗಟ್ಟಿಗೊಳ್ಳಬೇಕೆಂಬುದೇ ನಮ್ಮ ಏಕೈಕ ಆಶಯ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮದ ದೀಪು ಚಂದ್ರ ದಾಸ್ ಎಂಬ ವ್ಯಕ್ತಿಯನ್ನು ಅನ್ಯ ಧರ್ಮದವರು ತಳಿಸಿ, ಹೊಡೆದುಬಡೆದು, ಜೀವಂತವಾಗಿದ್ದಾಗಲೇ ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆಯನ್ನು ಉಲ್ಲೇಖಿಸಿ ತೀವ್ರವಾಗಿ ಖಂಡಿಸಿದರು. “ಇದು ಯಾವ ಧರ್ಮ? ಯಾವ ನೀತಿ? ಯಾವ ನ್ಯಾಯ? ಇಂತಹ ಕ್ರೌರ್ಯವನ್ನು ನಾವು ಖಂಡಿಸುತ್ತೇವೆ. ಅದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿರಬೇಕು. ಯಾವುದೇ ಸಮಸ್ಯೆ ಬಂದರೂ ಕಾನೂನಿನ ಮಾರ್ಗದಲ್ಲೇ ಹೋರಾಟ ನಡೆಸಬೇಕು. ನಮ್ಮ ದೇಶದಲ್ಲಿಯೂ, ಜಗತ್ತಿನಲ್ಲಿಯೂ ಕಾನೂನು ಇದೆ. ಯಾವುದೇ ದೇಶದಲ್ಲಿ ನಮ್ಮ ಬಾಂಧವರಿಗೆ ತೊಂದರೆಯಾದರೆ, ನಾವು ಕಾನೂನಾತ್ಮಕವಾಗಿ ಹೋರಾಡಲು ಸಿದ್ಧರಾಗಿರಬೇಕು,” ಎಂದು ಹೇಳಿದರು.
ಹಿಂದೂ ಉತ್ಸವಕ್ಕೆ ಹಿಂದೂ ಬಾಂಧವರ ಸಹಕಾರ ಅಗತ್ಯವಿದೆ ಎಂದು ಕರೆ ನೀಡಿದ ಅವರು, “ಹಿಂದೂ ಅಂದರೆ ಅದು ಸನಾತನ ಧರ್ಮ. ಹಿಂದೂ ಅಂದರೆ ಅದು ವೈಜ್ಞಾನಿಕ ಧರ್ಮ. ಹಿಂದೂ ಧರ್ಮ ಮೂಢನಂಬಿಕೆಗಳ ಮೇಲೆ ನಿಂತ ಧರ್ಮವಲ್ಲ; ಅದು ವೈಜ್ಞಾನಿಕ ತಳಹದಿಯ ಮೇಲೆ ಬಂದ ಧರ್ಮ. ಹಿಂದೂ ಧರ್ಮದ ವೈಭವ ಮತ್ತು ಶಕ್ತಿಯನ್ನು ಎತ್ತಿ ಹಿಡಿಯುವುದೇ ನಮ್ಮ ಮುಖ್ಯ ಉದ್ದೇಶ. ಯಾವುದೇ ಅನ್ಯ ಧರ್ಮದ ಮೇಲೆ ದಾಳಿ ಮಾಡುವುದಾಗಲಿ, ಅವಮಾನಿಸುವುದಾಗಲಿ ನಮ್ಮ ಉದ್ದೇಶವಲ್ಲ. ನಮ್ಮ ಧರ್ಮವೇ ‘ಸರ್ವೇ ಜನ ಸುಖಿನೋ ಭವಂತು’ ಎಂದು ಸಾರುತ್ತದೆ—ಅಂದರೆ ದೇಶದಲ್ಲಿರುವ ಪ್ರತಿಯೊಂದು ಜೀವಿಯೂ, ಪ್ರತಿಯೊಬ್ಬ ವ್ಯಕ್ತಿಯೂ ಸುಖವಾಗಿ ಇರಬೇಕು ಎಂಬುದೇ ಅದರ ಅರ್ಥ,” ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, “ಹಿಂದೂ ಉತ್ಸವ ಸಮಿತಿಯನ್ನು ನೋಂದಣಿ ಮಾಡಿಕೊಂಡು ಹಿಂದೂ ಭವನವನ್ನು ಕಟ್ಟುವ ಉದ್ದೇಶ ನಮ್ಮದು. ಜೊತೆಗೆ ಗೋಶಾಲೆ ಸ್ಥಾಪಿಸುವ ಆಶಯವೂ ಇದೆ. ಹಿಂದೂ ಭವನ ನಿರ್ಮಾಣದ ಮೂಲಕ ಬಡವರ ಮಕ್ಕಳ, ವಿಶೇಷವಾಗಿ ಬಡ ಹಿಂದೂ ಹೆಣ್ಣು ಮಕ್ಕಳ ಮದುವೆ ಸಂದರ್ಭದಲ್ಲಿ ಆಗುವ ಹೆಚ್ಚಿನ ವೆಚ್ಚಕ್ಕೆ ನೆರವಾಗುವ ಉದ್ದೇಶವಿದೆ. ಜೊತೆಗೆ ಮುಕ್ಕೋಟಿ ದೇವರುಗಳ ವಾಸವಿರುವ ಗೋಮಾತೆಯ ರಕ್ಷಣೆಗೆ ಗೋಶಾಲೆಯ ಅಗತ್ಯವಿದೆ,” ಎಂದರು.
ಜನವರಿ 23ರಂದು ನಡೆಯುವ ಹಿಂದೂ ಉತ್ಸವಕ್ಕೆ ರಾಜಕೀಯ ಭೇದಭಾವ ಬಿಟ್ಟು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ ಅವರು, “ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಹಿಂದೂ ಉತ್ಸವಕ್ಕೆ ಬರುವ ಪ್ರತಿಯೊಬ್ಬರೂ ನಾಯಕರೇ,” ಎಂದು ಹೇಳಿದರು. ಈ ಉತ್ಸವದಲ್ಲಿ ನಮ್ಮ ದೇಶದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಮೂರ್ತಿ ಹಾಗೂ ಜೈ ಹನುಮಾನ್ ಮೂರ್ತಿ ಆಗಮನವು ವಿಶೇಷ ಆಕರ್ಷಣೆಯಾಗಲಿದೆ ಎಂದರು.ಇಂದು ಉತ್ಸವದ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಮುಂದಿನ ಮತ್ತೊಂದು ಸಭೆಯ ನಂತರ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಪ್ರಶಾಂತ್ ಗೌಡ, ಪ್ರಭಾಕರ್ ಕಾರ್ವಿ, ಮಂಜುನಾಥ ವಿ. ನಾಯ್ಕ್, ಮನೋಹರ ಡಿ. ಗಾಂವಕರ್, ಲಕ್ಷ್ಮಿಕಾಂತ ನಾಯ್ಕ್, ಅಂಕಿತ ಬಂಟ್, ವಿದ್ಯಾಧರ, ಗಜು ಶೆಟ್ಟಿ, ಸುರೇಶ್ ಬೋವಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸುಂದರ ಖಾರ್ವಿ ವಂದಿಸಿದರು.
ವರದಿ: ಕಿರಣ ಗಾಂವಕರ

